ಬಟ್ಟೆ ಅಂಗಡಿಗೆ ಬೆಂಕಿ: ಅಪಾರ ಹಾನಿ
ಕೋಟ: ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಪಾರ ಪ್ರಮಾಣದ ಬಟ್ಟೆಬರೆ ಮತ್ತು ಇತರ ವಸ್ತುಗಳು ಹಾನಿಗೊಳಗಾದ ಘಟನೆ ಸೋಮವಾರ ನಡೆದಿದೆ.
ಉತ್ತರಪ್ರದೇಶ ಮೂಲದ ವಿಜಯ ಬಹದ್ದೂರ್ ಎಂಬವರ ಮಾಲಿಕತ್ವದ ಮಳಿಗೆಯಲ್ಲಿ ಲಕ್ಷಾಂತರ ರು. ಮೌಲ್ಯದ ಬಟ್ಟೆಗಳನ್ನು ದಾಸ್ತಾನು ಇಡಲಾಗಿತ್ತು. ಪ್ರತಿನಿತ್ಯ ರಾತ್ರಿ 8.30ಕ್ಕೆ ಅಂಗಡಿ ಮುಚ್ಚಲಾಗುತ್ತಿತ್ತಾದರೂ, ಸೋಮವಾರ ಅಂಗಡಿಯಲ್ಲಿ ಗಿರಾಕಿಗಳು ಜಾಸ್ತಿ ಇದ್ದ ಕಾರಣ 9 ಗಂಟೆಗೆ ಅಂಗಡಿ ಮುಚ್ಚಿ ಮಾಲಕರು ತೆರಳಿದ್ದರು. ಸ್ವಲ್ಪ ಹೊತ್ತಿನಲ್ಲಿ ಅಂಗಡಿಯಲ್ಲಿ ಇನ್ವರ್ಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ಕಂಪ್ಯೂಟರ್, ಬ್ಯಾಟರಿ, ಯು.ಪಿ.ಎಸ್., ನೂರಾರು ಬಟ್ಟೆಗಳು ಒಟ್ಟು ರು. 2 ಲಕ್ಷ ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ. ಈ ಸಂದರ್ಭ ಸ್ಥಳೀಯರು ಮತ್ತು ಕುಂದಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಇನ್ನಷ್ಟು ನಷ್ಟ ಸಂಭವಿಸುವುದನ್ನು ತಡೆದಿದ್ದಾರೆ. ಕೋಟ ಪೊಲೀಸ್ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದರು.