ಆರಂಭ ದಿನವೇ ಎಲ್ಲ ಮಕ್ಕಳಿಗಿಲ್ಲ ಕ್ಷೀರಭಾಗ್ಯ
ಬಂಟ್ವಾಳ: ಹಾಲಿನ ಹುಡಿ ಸರಬರಾಜು ವ್ಯವಸ್ಥೆಯ ಲೋಪ ಸೇರಿದಂತೆ ಹಲವು ವೈಫಲ್ಯಗಳಿಂದಾಗಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಹಾಲು ವಿತರಣೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಹಾಲಿನ ಹುಡಿ ಸರಬರಾಜಾಗದೆ ಇದ್ದ ಹಿನ್ನೆಲೆಯಲ್ಲಿ ತಾಲೂಕಿನ ಸುಮಾರು 30ಕ್ಕೂ ಅಧಿಕ ಶಾಲೆಗಳ ಮಕ್ಕಳು ಆರಂಭದ ದಿನವೇ 'ಕ್ಷೀರ ಭಾಗ್ಯ'ದಿಂದ ವಂಚಿತರಾಗಬೇಕಾಯಿತು.
ಎಲ್ಲೆಲ್ಲಿ ಏನಾಯ್ತು..: ಗ್ರಾಮೀಣ ಪ್ರದೇಶವಾದ ಹೂ ಹಾಕುವ ಕಲ್ಲು ಪರಿಸರದ ಒಂದು ಶಾಲೆಯಲ್ಲಿ ಹಾಲು ವಿತರಣೆ ಕಾರ್ಯಕ್ರಮ ಇದೆ ಎಂದು ಎಸ್‌ಡಿಎಂಸಿಯವರಿಗೂ, ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ಹೋಗಿತ್ತು. ಸರ್ಕಾರದ ಕಾರ್ಯಕ್ರಮದಲ್ಲಿ ತಮ್ಮ ಹಾಜರಿ ಇರಲೇಬೇಕೆಂದು ಎಲ್ಲರೂ ಶಾಲೆಗೆ ಬಂದಿದ್ದರು. ಆದರೆ ಸರಬರಾಜಾಗಬೇಕಿದ್ದ ಹಾಲಿನ ಹುಡಿ ಶಾಲೆ ತಲುಪಿರಲಿಲ್ಲ. ಕೊನೆಗೆ ತಾಲೂಕು ಅಧಿಕಾರಿ ಸೂಚನೆಯಂತೆ ಬೇರೆ ಶಾಲೆಗೆ ಬಂದಿದ್ದ ಹಾಲಿನ ಹುಡಿಯನ್ನು ಎರವಲು ಪಡೆದುಕೊಂಡು 'ಕ್ಷೀರ ಭಾಗ್ಯ'ಕ್ಕೆ ಚಾಲನೆ ನೀಡಲಾಯಿತು.
ಚಿಕ್ಕ ಶಾಲೆಗೆ ದೊಡ್ಡ ಪ್ಯಾಕ್: ಕಲ್ಲಡ್ಕ ಸಮೀಪದ ಶಾಲೆಯಲ್ಲಿ ಇರುವ ಮಕ್ಕಳ ಸಂಖ್ಯೆ ಒಟ್ಟು ಹತ್ತು. ಕೆಎಂಎಫ್‌ನಿಂದ ಸರಬರಾಜಾದ ಹಾಲಿನ ಹುಡಿ ಪ್ಯಾಕ್‌ನ ತೂಕ 25 ಕೆ.ಜಿ., ಶಾಲೆಯವರು ಆ ಪ್ಯಾಕ್ ಓಪನ್ ಮಾಡಿದರೆ ಹುಡಿ ಅನಾವಶ್ಯಕವಾಗಿ ಹಾಳಾಗುತ್ತದೆ. ಆ ಕಾರಣಕ್ಕೆ ಉಪಯೋಗಿಸಬೇಡಿ, ಸಾಧ್ಯವಿದ್ದರೆ ಸ್ಥಳೀಯವಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಿ ಎಂಬ ಅಧಿಕಾರಿಗಳ ಸೂಚನೆಯಂತೆ ಬೃಹತ್ ಪ್ಯಾಕ್‌ನ್ನು ಉಪಯೋಗಿಸದೆ ಹಾಗೆಯೇ ಇಟ್ಟುಬಿಟ್ಟರು. 5ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿರುವ ತಾಲೂಕಿನ ಎಲ್ಲ ಶಾಲೆಗಳಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ.
ಕೆಎಂಎಫ್ ಸಂಸ್ಥೆಗೆ ಸರ್ಕಾರ ತುರಾತುರಿಯಲ್ಲಿ ಹಾಲಿನ ಹುಡಿ ಸರಬರಾಜಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸೇನೆಗಳಿಗೆ ಒದಗಿಸುವ ಹಾಲಿನ ಹುಡಿಯ ಬೃಹತ್ ಪ್ಯಾಕ್‌ಗಳನ್ನು ಸರಬರಾಜು ಮಾಡಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಅಗತ್ಯವಿರುವ 1, 2, 5, 10 ಕೆ.ಜಿ. ತೂಕದ ಹಾಲಿನ ಹುಡಿ ಪ್ಯಾಕೆಟ್‌ಗಳನ್ನು ಕೆಎಂಎಫ್ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 ಮಕ್ಕಳಿಗೆ ಹಾಲು: ಬಿ.ಸಿ. ರೋಡ್ ಸಮೀಪದ ಕೊಡಂಗೆ ಪ್ರೌಢಶಾಲೆಯಲ್ಲಿ ರಂಝಾನ್ ಉಪವಾಸದ ಹಿನ್ನೆಲೆಯಲ್ಲಿ ಶಾಲೆಯ ಮೂವರು ಮಕ್ಕಳು ಮಾತ್ರ ಹಾಲು ಸ್ವೀಕರಿಸಿದರು. ಇಲ್ಲಿನ ಬಹುಸಂಖ್ಯೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಲಿಯುತ್ತಿದ್ದು, ರಂಝಾನ್ ಉಪವಾಸದ ಹಿನ್ನೆಲೆಯಲ್ಲಿ ಅವರ್ಯಾರೂ ಹಾಲು ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ.
ಈ ನಡುವೆ, ಅಲ್ಪಸಂಖ್ಯಾತ ಮಕ್ಕಳು ಬಹುಸಂಖ್ಯೆಯಲ್ಲಿರುವ ವಿವಿಧ ಶಾಲೆಗಳಲ್ಲಿ ಹಾಲು ವಿತರಣೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ನಾಳೆ ಕೊಡಿ..: ಬಾಳ್ತಿಲ ಸರ್ಕಾರಿ ಶಾಲೆಗೆ ಬುಧವಾರವೇ ಬರಬೇಕಾಗಿದ್ದ ಹಾಲಿನ ಹುಡಿ ಸರಬರಾಜಾದದ್ದು ಗುರುವಾರ ಮಧ್ಯಾಹ್ನ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಾಲು ವಿತರಣೆ ಇಲ್ಲಿ ಒಂದು ದಿನ ವಿಳಂಬವಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಶುಕ್ರವಾರದಿಂದ ಹಾಲು ವಿತರಣೆ ಮಾಡುವಂತೆ ಸೂಚನೆ ಬಂದಿದೆ ಎಂದು ವರದಿಯಾಗಿದೆ. ಮಾಹಿತಿಯ ಕೊರತೆಯಿಂದಾಗಿ ಹಲವು ಶಾಲೆಗಳಲ್ಲಿಯೂ ಇದೇ ರೀತಿಯ ಸನ್ನಿವೇಶಗಳು ನಿರ್ಮಾಣಗೊಂಡಿದ್ದು, ಆ.1ರಂದು ಆರಂಭಗೊಳ್ಳಬೇಕಾಗಿದ್ದ ಈ ಕಾರ್ಯಕ್ರಮ ಆ.2ರಿಂದ ಕೆಲವು ಶಾಲೆಗಳಲ್ಲಿ ಚಾಲನೆ ಪಡೆದುಕೊಳ್ಳಲಿದೆ.
13 ಶಾಲೆಗಳಲ್ಲಿ 1 ತಿಂಗಳು ವಿಳಂಬ: ಸರ್ಕಾರೇತರ ಸಂಸ್ಥೆ ಇಸ್ಕಾನ್ ಮೂಲಕ ಬಿಸಿಯೂಟ ವಿತರಣೆಯಾಗುತ್ತಿರುವ ಶಾಲೆಗಳಿಗೆ ಹಾಲು ವಿತರಣೆ ಇನ್ನೂ 1 ತಿಂಗಳು ವಿಳಂಬವಾಗಲಿದೆ.
ಬಂಟ್ವಾಳ ತಾಲೂಕಿನಲ್ಲಿ ಇಸ್ಕಾನ್ ಬಿಸಿಯೂಟ ಸರಬರಾಜು ಮಾಡುವ 13 ಶಾಲೆಗಳಿದ್ದು, ಈ ಎಲ್ಲ ಶಾಲೆಗಳಲ್ಲಿ ಮಕ್ಕಳು ಕ್ಷೀರಭಾಗ್ಯಕ್ಕೆ ಮತ್ತಷ್ಟು ದಿನ ಕಾಯಬೇಕಾಗಿದೆ.
ಹುಡಿಯಿಂದ ಹಾಲು ತಯಾರಿ ಹಾಗೂ ಸರಬರಾಜು ವ್ಯವಸ್ಥೆಗೆ ಇಸ್ಕಾನ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಒಂದು ತಿಂಗಳ ಒಳಗಾಗಿ ಇದಕ್ಕೆ ಪೂರಕವಾದ ವ್ಯವಸ್ಥೆ ಅಳವಡಿಸಿಕೊಂಡು ಇಸ್ಕಾನ್ ಹಾಲು ವಿತರಣೆ ಮಾಡಲಿದೆ ಎಂದು ತಿಳಿದು ಬಂದಿದೆ.
ಶೇ.70ರಷ್ಟು ಶಾಲೆಗಳಲ್ಲಿ ಜಾರಿ: ಹಾಲು ವಿತರಣೆ ಕಾರ್ಯಕ್ರಮ ಗುರುವಾರ ಬಂಟ್ವಾಳ ತಾಲೂಕಿನ ಶೇ.70ರಷ್ಟು ಶಾಲೆಗಳಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ ಎಂದು ಅಕ್ಷರ ದಾಸೋಹ ತಾಲೂಕು ಅಧಿಕಾರಿ ಶ್ರೀಕಾಂತತಿಳಿಸಿದ್ದಾರೆ.
ಹಾಲು ಹುಡಿ ಸರಬರಾಜು ವ್ಯವಸ್ಥೆಯಲ್ಲಿ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ಕೆಲವು ಸಮಸ್ಯೆ ಎದುರಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಪರಿಹಾರವಾಗಲಿದೆ. ಹಾಲು ತಯಾರಿಗೆ ಅಗತ್ಯವಿರುವ ಇಂಧನ ಹಾಗೂ ಸಕ್ಕರೆಗಾಗಿ ಪ್ರತಿ ಮಗುವಿಗೆ ದಿನಕ್ಕೆ 59 ಪೈಸೆಯಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಅನುದಾನವನ್ನು ಶೀಘ್ರ ಶಾಲೆಗಳಿಗೆ ಬಿಡುಗಡೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.
-ಮೌನೇಶ ವಿಶ್ವಕರ್ಮ