ಇಬ್ಬರು ಗೋವುಗಳ್ಳರ ಸೆರೆ; ನಾಲ್ವರು ಪರಾರಿ
ಬಂಟ್ವಾಳ: ದನಕಳ್ಳರ ಜಾಲವೊಂದನ್ನು ಭೇದಿಸಿರುವ ಬಂಟ್ವಾಳ ನಗರ ಪೊಲೀಸರು ಈ ಸಂಬಂಧ ಸ್ಕಾರ್ಪಿಯೋ ವಾಹನವೊಂದನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಜೋಕಟ್ಟೆ ನಿವಾಸಿಗಳಾದ ಹಂಝಾದ್(25) ಹಾಗೂ ಬಜ್ಪೆ ಬಳಿಯ ನಿವಾಸಿ ಮೊಮ್ಮದ್ ಹನೀಫ್ ಯಾನೆ ಗಂಧ ಹನೀಫ್ ಯಾನೆ ವೆಲಂಕಣಿ ಹನೀಫ್(50) ಎಂದು ಹೆಸರಿಸಲಾಗಿದೆ. ಕಾರ್ಯಾಚರಣೆ ವೇಳೆ ವಾಹನದಲ್ಲಿದ್ದ ನಾಲ್ವರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ನಗರ ಠಾಣೆಯ ಎಸ್.ಐ ಶೇಖರ್ ಮತ್ತವರ ತಂಡ ಬಿ.ಸಿ. ರೋಡಿನ ಗಾಣದಪಡ್ಪು ಬಳಿ ಗುರುವಾರ ಮುಂಜಾನೆ ಸುಮಾರು 2.30ರ ಹೊತ್ತಿಗೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಬೆಳ್ತಂಗಡಿ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಸ್ಕಾರ್ಪಿಯೋ ವಾಹನವೊಂದು ಅನುಮಾನದಿಂದ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ನಾಲ್ವರು ವಾಹನದಿಂದ ಜಿಗಿದು ಪರಾರಿಯಾದರೆ, ಮುಂಭಾಗದಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬನನ್ನು ಪೊಲೀಸರು ಹಿಡಿದಿದ್ದಾರೆ. ಈ ಸಂದರ್ಭ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ, ಅದರಲ್ಲಿ ಸೀಟು ತೆರವು ಮಾಡಿದ್ದರು. ಬಂಧಿತರನ್ನು ಪ್ರಶ್ನಿಸಿದಾಗ ದನ ಕಳವುಗೈದು ಸಾಗಣೆ ಮಾಡುವ ಉದ್ದೇಶದಿಂದ ಸೀಟು ತೆರವುಗೊಳಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ತಕ್ಷಣ ಇಬ್ಬರನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ಮಹಮ್ಮದ್ ಹನೀಫ್ ಮೂಲತಃ ಕುಂದಾಪುರದ ಕೋಟೇಶ್ವರ ನಿವಾಸಿಯಾಗಿದ್ದು, ಮೂಡಬಿದ್ರೆ, ಪಾಂಡೇಶ್ವರ, ಕುಂದಾಪುರ, ಬಂಟ್ವಾಳ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಈತನ ಮೇಲೆ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆ ಕನ್ನ: ಚಿನ್ನಾಭರಣ ಕಳವು
ಬಂಟ್ವಾಳ: ಯಾರೂ ಇಲ್ಲದ ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ 2 ಪವನಿನ ಚಿನ್ನಾಭರಣ ಕಳವು ಮಾಡಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಕಾರಾಜೆ ಎಂಬಲ್ಲಿ ನಡೆದಿದೆ. ಇಲ್ಲಿನ ಬದ್ರುದ್ದೀನ್ ಅಹಮದ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದ್ದು, ಬುಧವಾರ ರಾತ್ರಿ 7ರಿಂದ ಗುರುವಾರ 7ರ ನಡುವೆ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ ಮನೆಮಂದಿ ತಮ್ಮ ಸಂಬಂಧಿಕರ ಮನೆಗೆ ಇಫ್ತಾರ್ ಕೂಟಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಮನೆಗೆ ವಾಪಾಸಾದಾಗ ಕಳವು ನಡೆದಿರುವುದು ಗೊತ್ತಾಗಿದೆ. ಕಳವಾದ ಚಿನ್ನದ ಮೌಲ್ಯ ರು. 24 ಸಾವಿರ ಎಂದು ಅಂದಾಜಿಸಲಾಗಿದ್ದು, ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಫೇಸ್ಬುಕ್ ಪರಿಚಯ ಅತ್ಯಾಚಾರದಲ್ಲಿ ಅಂತ್ಯ
ಕಾರ್ಕಳ: ಫೇಸ್ಬುಕ್ನಲ್ಲಿ ಪರಿಚಯವಾದ ವಿದ್ಯಾರ್ಥಿನಿ ಜೊತೆ ಪ್ರೀತಿಯ ನಾಟಕವಾಡಿ ಆಕೆಯನ್ನು ಅತ್ಯಾಚಾರ ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಪಟ್ಟಣದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿದ್ದು, ಆರೋಪಿ ಮಹಮ್ಮದ್ ನಂಶೀದ್ ಎಂಬಾತ ಪೊಲೀಸ್ ಅತಿಥಿಯಾಗಿದ್ದಾನೆ. ಈ ಇಬ್ಬರ ನಡುವೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ಆರೋಪಿ ನಂಶೀದ್ ಪ್ರೀತಿಯ ನಾಟಕವಾಡಿ ವಿದ್ಯಾರ್ಥಿನಿಯನ್ನು ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಪರಾರಿಯಾಗಿದ್ದ. ಇದೀಗ ಆರೋಪಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
'ಬಹುಮಾನ ಎಸ್ಎಂಎಸ್': ವಂಚನೆ
ಮೂಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ನಿವಾಸಿ ಮಹಿಳೆಯೊಬ್ಬರು ಬಹುಮಾನದ ಹೆಸರಿನ ಎಸ್ಎಂಎಸ್ ನಂಬಿ ಲಕ್ಷಾಂತರ ರು. ವಂಚನೆಗೊಳಗಾಗಿದ್ದಾರೆ. ಮೂರುಕಾವೇರಿಯ ಸಿಲ್ವಿಯಾ ಫೆರ್ನಾಂಡಿಸ್ (28) ವಂಚನೆಗೊಳಗಾದವರು. ಜುಲೈ ಮೊದಲ ವಾರದಲ್ಲಿ ತಮ್ಮ ಮೊಬೈಲ್ಗೆ ಬ್ರಿಟಿಷ್ ಮೂಲದ ಯು.ಕೆ. ಟೊಯೊಟಾ ಕಂಪನಿ ಹೆಸರಿನಲ್ಲಿ 'ನಿಮಗೆ 5 ಕೋಟಿ ಬಹುಮಾನ ಬಂದಿದೆ, ಬಹುಮಾನ ಪಡೆಯಲು ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳನ್ನೊಳಗೊಂಡ ಬಯೋಡಾಟಾ ಕಳುಹಿಸುವಂತೆ ಮೆಸೇಜ್ ಬಂದಿತ್ತು. ಹಣದ ಆಸೆಯಿಂದ ಸಿಲ್ವಿಯಾ ಎಲ್ಲ ವಿವರಗಳನ್ನು ಕಂಪನಿಗೆ ಕಳುಹಿಸಿದ್ದರು. ಕೆಲ ದಿನಗಳ ಬಳಿಕ 448719748720 ದೂರವಾಣಿ ಸಂಖ್ಯೆಯಿಂದ ಕರೆ ಬಂದಿದ್ದು ನಿಮಗೆ ರು. 5 ಕೋಟಿ ಬಹುಮಾನ ಮಂಜೂರಾಗಿದ್ದು ಬಹುಮಾನ ಬೇಕಿದ್ದರೆ ಇಂತಿಷ್ಟು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ 14 ವಿವಿಧ ಬಗೆಯ ಸಂಖ್ಯೆ ನೀಡಿದ್ದರು. ಅದರಂತೆ ಸಿಲ್ವಿಯಾ ಜು.5ರಿಂದ 16ರ ಅವಧಿಯಲ್ಲಿ ಕಿನ್ನಿಗೋಳಿಯ ಸಿಂಡಿಕೇಟ್, ಬ್ಯಾಂಕ್ ಆಫ್ ಬರೋಡಾ, ಕರ್ಣಾಟಕ ಮತ್ತು ಸ್ಟೇಟ್ ಬ್ಯಾಂಕ್ನಿಂದ ಹಂತ ಹಂತವಾಗಿ ಒಟ್ಟು ರು. 3,07,333 ಹಣವನ್ನು ಅವರು ತಿಳಿಸಿದ ಖಾತೆಗೆ ಜಮಾ ಮಾಡಿದ್ದರು. ಜುಲೈ ಅಂತ್ಯದವರೆಗೆ ಕಂಪನಿಯಿಂದ ಯಾವುದೇ ಮಾಹಿತಿ ಬಾರದ್ದರಿಂದ ಕಂಗಲಾಗಿ ಮೂಲ್ಕಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಯು.ಕೆ.ಟೊಯೋಟಾ ಕಂಪನಿ ವಿರುದ್ಧ ಸೈಬರ್ ಅಪರಾಧ ಕಾಯ್ದೆಯ ಅನ್ವಯ ಸೆಕ್ಷನ್ 406 ಮತ್ತು 420 ರಂತೆ ಹಣ ವಂಚನೆಯ ಕೇಸು ದಾಖಲಾಗಿದೆ. ಇಂತಹ ವಂಚನೆ ಪ್ರಕರಣಗಳ ಕುರಿತು ಜನತೆ ಜಾಗೃತರಾಗಿರಬೇಕು ಎಂದು ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಬಶೀರ್ ಅಹಮ್ಮದ್ ವಿನಂತಿಸಿದ್ದಾರೆ.