ಐಪಿಎಸ್ ಅಧಿಕಾರಿ ಲಾಬೂರಾಂ ಸಹಿತ 8 ಪೊಲೀಸ್ ಸಿಬ್ಬಂದಿ ವಿರುದ್ಧ ಕೇಸು
ಸುಳ್ಯ: ಒಂದೂವರೆ ವರ್ಷದ ಹಿಂದೆ ಸುಳ್ಯದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಲಾಬೂರಾಂ ಸಹಿತ ಹಲವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೇಸು ದಾಖಲಾಗಿದೆ.
ಸುಳ್ಯ ಪೊಲೀಸ್ ಠಾಣೆಗೆ ಕಲ್ಲು ತೂರಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಜೆಪಿ ಮುಖಂಡರ ಮೇಲೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಹಾಗೂ ಅವರ ಮನೆಗೆ ತೆರಳಿ ಮಹಿಳೆಯರನ್ನು ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಆಗಿನ ಎಸ್ಪಿ, ಎಡಿಷನಲ್ ಎಸ್ಪಿ, ಮೂವರು ಎಸ್ಐಗಳು ಹಾಗೂ ಮೂವರು ಕಾನ್ಸ್ಟೇಬಲ್ಗಳ ವಿರುದ್ಧ ಸುಳ್ಯ ನ್ಯಾಯಾಲದಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: 2011ರ ಡಿ. 14ರಂದು ಎಲಿಮಲೆಯಲ್ಲಿ ನಡೆದ ವಿದ್ಯಾರ್ಥಿಗಳ ಘರ್ಷಣೆ ಹಾಗೂ ಜಾಲ್ಸೂರಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ- ಯುವತಿಯರನ್ನು ಸಾರ್ವಜನಿಕರು ಹಿಡಿದುಕೊಟ್ಟ ಪ್ರಕರಣಕ್ಕೆ ಸಂಬಂಧಿಸಿ ಉದ್ವಿಗ್ನತೆ ಉಂಟಾಗಿ ಠಾಣೆ ಎದುರು ಸೇರಿದ್ದ ಉದ್ರಿಕ್ತರು ಠಾಣೆಗೆ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆ ಸುಳ್ಯದಲ್ಲಿ ಸಂಚಲನಕ್ಕೆ ಕಾರಣವಾಗಿ ಹಲವು ಬಿಜೆಪಿ ನಾಯಕರು ಬಂಧಿಸಲ್ಪಟ್ಟು ಜೈಲು ಸೇರಿದ್ದರು. ಬಳಿಕ ಉನ್ನತ ಮಟ್ಟದ ತನಿಖೆ ನಡೆದು ಕೆಲವು ಪೊಲೀಸರ ಅಮಾನತು ಕೂಡಾ ನಡೆದಿತ್ತು.
ದೂರು: ಘಟನೆಗೆ ಸಂಬಂಧಿಸಿ ಮಾತುಕತೆಗೆ ಹಾಜರಾದ ಬಿಜೆಪಿ ಮುಖಂಡರ ಮನೆಗೆ ತೆರಳಿ ಅವರನ್ನು ಬಂಧಿಸಿ ಠಾಣೆಯಲ್ಲಿ ಕೂಡಿ ಹಾಕಿದ್ದಲ್ಲದೆ ಮನೆಯಲ್ಲಿದ್ದ ಮಹಿಳೆಯರನ್ನು ಪೊಲೀಸರು ಬೆದರಿಸಿದ್ದರು ಎಂದು ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಹಾಕಿ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದರು. ಇದರ ವಿರುದ್ಧ ಹಲ್ಲೆಗೆ ಒಳಗಾದ ನ.ಪಂ. ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ, ಬಿಜೆಪಿ ನಗರ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಗುರುಪ್ರಸಾದ್ ಹಾಗೂ ರಾತ್ರಿ ವೇಳೆ ಬಿಜೆಪಿ ಮುಖಂಡರ ಮನೆಗೆ ತೆರಳಿ ಮಹಿಳೆಯರನ್ನು ಬೆದರಿಸಿದ್ದರು ಎಂಬ ಕಾರಣಕ್ಕೆ ಲೀಲಾವತಿ ರೈ, ಸಂಜೀವಿ ರೈ, ರೂಪಾ ರೈ ದೂರು ನೀಡಿದ್ದರು. ಇವರೆಲ್ಲಾ ಪ್ರತ್ಯೇಕವಾಗಿ ಖಾಸಗಿ ದೂರು ದಾಖಲಿಸಿದ್ದು, ಆಗಿನ ಎಸ್.ಪಿ. ಲಾಬೂರಾಂ, ಎಡಿಷನಲ್ ಎಸ್ಪಿ ಪ್ರಭಾಕರ, ಎಸ್ಐಗಳಾದ ರವಿಕುಮಾರ್, ಪೌಲ್ಪ್ರಿಯಾ ಕುಮಾರ್, ಆನಂದ, ಕಾನ್ಸ್ಟೇಬಲ್ಗಳಾದ ರಮೇಶ, ಪಳನಿವೇಲು ಹಾಗೂ ಕುರಿಯಕೋಸ್ ಎಂಬವರ ವಿರುದ್ಧ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ. ಅ.1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.