'ಸ್ತನ ಕ್ಯಾನ್ಸರ್ ಬೇಗ ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭ'
ಮಂಗಳೂರು: ಶೇ.90 ಮಹಿಳೆಯರು ತಾವಾಗಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುತ್ತಾರೆ, ಆರಂಭಿಕ ಹಂತದಲ್ಲಿ ರೋಗ ಲಕ್ಷಣ ಕಂಡು ಕೊಂಡರೆ ಶಸ್ತ್ರ ಚಿಕಿತ್ಸೆ ಮೂಲಕ ಶೇ.80 ರೋಗಿಗಳನ್ನು ಉಳಿಸಬಹುದು ಎಂದು ಕೆಎಂಸಿ ಸ್ತ್ರೀರೋಗ ತಜ್ಞೆ ಡಾ. ಆಶಾ ಶ್ಯಾನ್ಭಾಗ್ ಹೇಳಿದರು.
ಸೇಂಟ್ ಆಗ್ನೆಸ್ ಕಾಲೇಜಿನ ಸಭಾಭವನದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ವಿಚಾರವಾಗಿ ತಪಾಸಣೆ, ಚಿಕಿತ್ಸೆ ಮತ್ತು ನಿರೋಧಕ ಕ್ರಮಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ತನ ಕ್ಯಾನ್ಸರ್ ವಿಶ್ವಕ್ಕೆ ದೊಡ್ಡ ಪಿಡುಗು. 40 ವಯಸ್ಸಿನ ಬಳಿಕ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಮಹಿಳೆಯರು ವರ್ಷಕ್ಕೊಮ್ಮೆ ಮೆಮೊಗ್ರಾಂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸ್ತನದಲ್ಲಿ ಗಡ್ಡೆಗಳು ಕಂಡು ಬಂದರೆ ಅದು ಕ್ಯಾನ್ಸರ್ನ ಮೊದಲ ಹಂತ. ಈ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣ ಮಾಡಿಕೊಳ್ಳಬಹುದು. 20 ವರ್ಷ ದಾಟಿದ ಯುವತಿಯರು ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದ ಡಾ. ಆಶಾ, ಶಸ್ತ್ರ ಚಿಕಿತ್ಸೆ ಬಳಿಕವೂ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದರಿಂದ ಆಗಾಗ ಮೆಮೊಗ್ರಾಂ ಪರೀಕ್ಷೆ ಮಾಡಬೇಕು ಎಂದರು ಸಲಹೆ ಮಾಡಿದರು.
ಆಗ್ನೇಸ್ ಕಾಲೇಜ್ ಡೀನ್ ದೇವಿಪ್ರಭಾ, ವೆಲೆನ್ಸಿಯಾ ಲಯನ್ಸ್ ಕ್ಲಬ್ ಅಧ್ಯಕ್ಷೆ ವೈಲೇಟ್ ಪಿರೇರಾ ಇದ್ದರು. ಝಿಯಾನ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ಕರೀನಾ ಡಿಸೋಜ ವಂದಿಸಿದರು.