ನಿಧಾನಿಸಿ ಯೋಚಿಸಿದರೆ ಜಗಳ ನಡೆಯದು: ರಾಘವೇಶ್ವರ ಶ್ರೀ
ವಿಟ್ಲ: ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನವಾಗಿ ಯೋಚಿಸಿಯೇ ನಿಜ ತಿಳಿದುಕೊಂಡು ಸಮಾಜದಲ್ಲಿ ನಡೆದಾಗ ಯಾವ ಜಗಳಗಳೂ ನಡೆಯುವುದಿಲ್ಲ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಚಾತುರ್ಮಾಸ್ಯ ಪ್ರಯುಕ್ತ ಹಮ್ಮಿಕೊಂಡಿರುವ ರಾಮಕಥಾ ಕಾರ್ಯಕ್ರಮ ಸರಣಿಯ ಐದನೇ ದಿನ ಗುರುವಾರ ಅವರು ಪ್ರವಚನ ನೀಡಿದರು.
ವಾಲಿ ಸುಗ್ರೀವರ ಕತೆ ವಿವರಿಸಿದ ಸ್ವಾಮೀಜಿ, ಬೇರೆಯವರ ಮಾತು ಕೇಳಿ ಅಥವಾ ಚಿಕ್ಕ ಚಿಕ್ಕ ಕಾರಣಗಳಿಗೆ ಅಣ್ಣ-ತಮ್ಮಂದಿರು, ಬಂದು ಮಿತ್ರರು ಕೆಲವೊಂದು ಸಂಸಾರಗಳು ಪರಸ್ಪರ ವಿರೋಧಿಗಳಾಗಿ ಬಾಳುವುದನ್ನು ಕಾಣುತ್ತೇವೆ. ವಾಲಿ-ಸುಗ್ರೀವರು ಅನ್ಯೋನ್ಯವಾಗಿದ್ದರು. ಆದರೆ ಚಿಕ್ಕದೊಂದು ಘಟನೆ ಇವರಿಬ್ಬರಲ್ಲೂ ದ್ವೇಷ ಬಿತ್ತಿತು ಎಂದರು.
ಭಗವಂತನನ್ನು ಸೇರುವುದಕ್ಕೆ ಮಾಯೆಯೇ ಅಡ್ಡಿ. ಅಂದರೆ ಇಲ್ಲಿ ಜೀವ, ಜೀವಾದ್ವೈತಗಳ ಅರ್ಥಾತ್, ವಾಲಿ ಸುಗ್ರೀವರ ನಡುವೆ ಮಾಯೆಯ ಪ್ರವೇಶವಾಗುತ್ತದೆ. ಇದರ ಪರಿಣಾಮವೇ ವಿಪತ್ತು ಎದುರಾಗುತ್ತದೆ ಎಂದು ಅವರು ವಿವರಿಸಿದರು.
ರೂಪಕ ಪ್ರಸ್ತುತಿ: ರೂಪಕದಲ್ಲಿ ಸೀತಾಪಹರಣದ ದೃಶ್ಯ, ರಾವಣ ಸೀತೆಯನ್ನು ಅಪಹರಿಸುವ ಸಂದರ್ಭ, ಜಟಾಯು ಜತೆ ಕಾಳಗ, ರಾವಣನೊಂದಿಗೆ ಹೋರಾಡಿ ಸತ್ತು ಬಿದ್ದು ಜಟಾಯು, ಸೀತೆ ಹನುಮನನ್ನು ಗಮನಿಸಿ ಆಭರಣ ಕಟ್ಟಿ ಎಸೆಯುವ ದೃಶ್ಯ ಪ್ರಸ್ತುತಪಡಿಸಲಾಯಿತು.
ಕಲಾವಿದರಾದ ನೀರ್ನಳ್ಳಿ ಗಣಪತಿ, ಅಶೋಕ, ಗೋಪಿ ಅವರು ಚಿತ್ರಗಳು ಹಾಗೂ ಥರ್ಮಾಕೋಲ್ ಕೆತ್ತನೆ ಮೂಲಕ ಗಮನ ಸೆಳೆದರು.
ಗಾಯಕರಾದ ಚಂದ್ರಶೇಖರ ಕೆದಿಲಾಯ, ಶಂಕರಿ ಮೂರ್ತಿ ಬಾಳಿಲ, ಶ್ರೀಪಾದ ಭಟ್ ಕಡತೋಕ, ಸತ್ಯಜಿತ್ ಕೋಲ್ಕೊತ್ತಾ, ಟಿ.ವಿ.ಗಿರಿ, ಸಾಕೇತ್ ಶರ್ಮ, ಸುಭದ್ರಾ, ಕೊಳಲಿನಲ್ಲಿ ಗಣೇಶ್ ಕೆ.ಎಸ್., ಸಿತಾರ್ನಲ್ಲಿ ಸುಬ್ರಹ್ಮಣ್ಯ ಹೆಗಡೆ, ತಬಲಾದಲ್ಲಿ ಗಣೇಶ್ ಗುಂಡ್ಕಲ್ ಸಹಕರಿಸಿದರು.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಹಡಿನಬಾಳ, ವಿಷ್ಣು ಭಟ್ ಮೂರೂರು ಮತ್ತು ಈಶ್ವರ ಭಟ್ ಕಟ್ಟೆ, ರೇಶ್ಮಾ ಭಟ್ ಅವರಿಂದ ರೂಪಕ ಪ್ರದರ್ಶನಗೊಂಡಿತು. ಹಾರಕರೆ ನಾರಾಯಣ ಭಟ್ ಮತ್ತು ಮನೆಯವರು ಭಿಕ್ಷಾಸೇವೆ ನೆರವೇರಿಸಿದರು. ಮೋಹನದಾಸ ಶೆಟ್ಟಿ ದಂಪತಿ ರಾಮಕಥಾದ ಪ್ರಾಯೋಜಕತ್ವ ವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು ಪಾಲ್ಗೊಂಡರು.