ಫಿಲೋಮಿನಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಪುತ್ತೂರು: ಮೂಲ್ಕಿ ವಿಜಯಾ ಕಾಲೇಜಿನ ಆವರಣದಲ್ಲಿ ನಡೆದ ಪ್ರಾದೇಶಿಕ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಮಾದರಿ ಪ್ರದರ್ಶಿಸಿದ ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿಗಳಾದ ಪ್ರೀತಂ ಕ್ಯಾಸ್ಟಲಿನೊ ಮತ್ತು ರಾನ್ಸನ್ ರಾಂತಿಸ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದವರು. ಭೌತಶಾಸ್ತ್ರ ಉಪನ್ಯಾಸಕ ಚಂದ್ರಶೇಖರ ಕೆ. ಮತ್ತು ವಿಭಾಗದ ಮುಖ್ಯಸ್ಥ ಡಾ.ಎ.ಪಿ ರಾಧಾಕೃಷ್ಣ ಮಾರ್ಗದರ್ಶನ ನೀಡಿದ್ದರು.
ನಾಳೆ 'ಆಷಾಢದಲ್ಲೊಂದು ದಿನ'
ಮೂಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯಿತಿನ ಪಂಜ- ಕೊಯಿಕುಡೆಯ ನವಜ್ಯೋತಿ ಮಹಿಳಾ ಮಂಡಲ ಆಶ್ರಯದಲ್ಲಿ ಮಂಗಳೂರಿನ ನೆಹರೂ ಯುವ ಕೇಂದ್ರದ ಸಹಯೋಗದೊಂದಿಗೆ ಭಾನುವಾರ ಬೆಳಗ್ಗೆ ಇಲ್ಲಿನ ನವಜ್ಯೋತಿ ಮಹಿಳಾ ಮಂಡಲದ ಕಟ್ಟಡದಲ್ಲಿ ಆಷಾಢದಲ್ಲೊಂದು ದಿನ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಕೊಂಡೆಮೂಲ- ನಡುಗೋಡಿನ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ ಕಟೀಲು ಶಾಲಾ ಸರಸ್ವತಿ ಸದನದಲ್ಲಿ 'ಆಟಿಡೊಂಜಿ ಕೂಟ' ನಡೆಯಲಿದೆ.