ಮಂಗಳೂರಿಗೆ 'ತಂತ್ರಜ್ಞಾನ ಕೇಂದ್ರ' ಪ್ರಸ್ತಾಪ
ಮಂಗಳೂರು: ಮಂಗಳೂರಿನಲ್ಲಿ 'ತಂತ್ರಜ್ಞಾನ ಕೇಂದ್ರ' ಸ್ಥಾಪಿಸಲು ರಾಜ್ಯ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ವಿಭಾಗ ಉತ್ಸುಕವಾಗಿದೆ ಎಂದು ಬ್ಯಾರೀಸ್ ಗ್ಲೋಬಲ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ, ಕೆಸಿಸಿಐ ಐಟಿ ಸಬ್ ಕಮಿಟಿ ಸಿಇಒ ಪ್ರವೀಣ್ ಕುಮಾರ್ ಕಲ್ಬಾವಿ ಹೇಳಿದ್ದಾರೆ.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ 'ವ್ಯಾಪಾರ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಂಗಳೂರಿನಲ್ಲಿ 8 ರಿಂದ 10 ಸಾವಿರ ಮಂದಿ ಐಟಿ ಉದ್ಯೋಗಿಗಳಿದ್ದಾರೆ. 2020 ವೇಳೆಗೆ ಈ ಸಂಖ್ಯೆ ಒಂದು ಲಕ್ಷ ತಲುಪುವ ನಿರೀಕ್ಷೆ ಇದೆ. ಜುಲೈನಲ್ಲಿ ಬೆಂಗಳೂರಲ್ಲಿ ಐಟಿ ಇಲಾಖೆ ಸಭೆಯಲ್ಲಿ ಮಂಗಳೂರಿನಲ್ಲಿ ತಂತ್ರಜ್ಞಾನ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ನಡೆದಿದೆ ಎಂದರು. ವ್ಯಾಪಾರ, ಮತ್ಸ್ಯೋದ್ಯಮ, ಕೈಗಾರಿಕೆಗಳು ಹಾಗೂ ಐಟಿ ಕಂಪನಿಗಳ ಜತೆ ಸಂಪರ್ಕ ಇಲ್ಲ. ಐಟಿ ಮತ್ತು ಐಟಿಯೇತರ ರಂಗಗಳ ಮಧ್ಯೆ ಸಂಪರ್ಕ ಬೆಳೆಸಬೇಕಾಗಿದೆ. ಇದು ವ್ಯಾಪಾರಾಭಿವೃದ್ಧಿಯಲ್ಲಿ ಪ್ರಗತಿಗೆ ಕಾರಣವಾಗಬಹುದು ಎಂದರು.
ಹೋಸ್ಟ್ ಗಯಟರ್, ಅಟೋಮೇಷನ್ ಸೊಲ್ಯೂಷನ್ಸ್, ಟಾಟಾ ಡೊಕೊಮೊ, ನಿವೇಸ್ ಸೊಲ್ಯೂಷನ್ಸ್ ಬಗ್ಗೆ ಪ್ರತಿನಿಧಿಗಳು ಮಾಹಿತಿ ನೀಡಿದರು. ಕೆಸಿಸಿಐ ಕಾರ್ಯದರ್ಶಿ ರಾಮಮೋಹನ ಪೈ ಮಾರೂರು ಅಧ್ಯಕ್ಷತೆ ವಹಿಸಿದ್ದರು.