ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂರು ಬಾರಿ ಬುಕ್ ಮಾಡಿದ್ರೆ ಇನ್ನೊಂದು ರಿಯಾಯ್ತಿ!

Rashmi Kasaragodu
Updated On : 3 Aug 2013, 12:04 pm

ಮಂಗಳೂರು: ಮೂರು ಬಾರಿ ಟಿಕೆಟ್ ಬುಕ್ ಮಾಡಿ ಪ್ರಯಾಣಿಸಿದರೆ ಇನ್ನೊಂದು ಪ್ರಯಾಣಕ್ಕೆ ಶೇ.30 ರಿಯಾಯ್ತಿ.
 ಸಾಮಾನ್ಯವಾಗಿ ವಿಮಾನಯಾನ ಸಂಸ್ಥೆಗಳಲ್ಲಿ ಕಂಡುಬರುವ ಈ ಆಫರ್ ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಜಾರಿಗೆ ತಂದಿದೆ. ಖಾಸಗಿ ಟೂರಿಸ್ಟ್ ಬಸ್ಗಳ ಪ್ರಯಾಣಿಕರನ್ನು ಆಕರ್ಷಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜು.15ರಿಂದ ಜಾರಿಗೆ ಬಂದಿದ್ದು, ಸೆ.30ರ ವರೆಗೆ ಇರಲಿದೆ.
 ಈ ಯೋಜನೆಗೆ ಹೆಸರು 'ಪ್ರಯಾಣೋತ್ಸವ-ತ್ರಿಗುಣ ಲಾಭ'. ಹೆಚ್ಚು ಸಲ ಪ್ರಯಾಣಿಸಿ ಹೆಚ್ಚಿನ ರಿಯಾಯ್ತಿ ಹಾಗೂ ಲಾಭ ಪಡೆಯಿರಿ ಎಂದು ಸಂಸ್ಥೆ ಹೇಳುತ್ತಿದೆ. ಈ ರೀತಿಯ ಆಫರ್ ನೀಡಿರುವುದು ಇದೇ ಮೊದಲು. ಎಕ್ಸ್ಪ್ರೆಸ್, ರಾಜಹಂಸ ಹಾಗೂ ಐರಾವತ, ವೋಲ್ವೋ ಐಷಾರಾಮಿ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಈ ಅವಕಾಶ ನೀಡಿದೆ.
ಇ-ಟಿಕೆಟ್ ಬಳಸಿ ಸಂಚರಿಸಿ: ಕೆಎಸ್ಆರ್ಟಿಸಿ ಈ ಸೌಲಭ್ಯ ಎಲ್ಲ ಕಡೆಗಳಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸಿಗದು. ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಇ-ಟಿಕೆಟ್ ಬಳಸಿ ಪ್ರಯಾಣಿಸುವವರಿಗೆ ಮಾತ್ರ.
ರಾಜ್ಯದಲ್ಲಿ ಪ್ರತಿದಿನ ಇ-ಟಿಕೆಟ್ ಮೂಲಕ ಸುಮಾರು 7ರಿಂದ 8 ಸಾವಿರ ಮಂದಿ ಪ್ರಯಾಣಿಸುತ್ತಾರೆ. ಅವರು ಇದರ ಪ್ರಯೋಜನ ಪಡೆಯಬಹುದು. ಕೆಎಸ್ಆರ್ಟಿಸಿಯ ಇ-ಬುಕ್ಕಿಂಗ್ ಸೌಲಭ್ಯ ಹೊಂದಿರುವ ಎಕ್ಸ್ಪ್ರೆಸ್, ರಾಜಹಂಸ, ಐರಾವತ, ವೋಲ್ವೋ ಸೇರಿ ದಿನಂಪ್ರತಿ ಎರಡೂವರೆ ಸಾವಿರ ಟ್ರಿಪ್ಗಳಿಗೆ ಇದು ಅನ್ವಯವಾಗಲಿದೆ ಎನ್ನುತ್ತಾರೆ ಕೇಂದ್ರ ಕಚೇರಿ ಅಧಿಕಾರಿ ರಾಜೇಶ್.
ಶರತ್ತುಗಳೇನು?: ಆಫರ್ ಅವಧಿಯೊಳಗೆ ಮೂರು ಬಾರಿ ಪ್ರಯಾಣಿಸಿದರೆ, ನಾಲ್ಕನೇ ಬಾರಿಗೆ ಒಂದು ಟಿಕೆಟ್ನಲ್ಲಿ ರಿಯಾಯ್ತಿ ಸಿಗಲಿದೆ. ಅಂದರೆ ಶೇ.30 ರಿಯಾಯ್ತಿ ಟಿಕೆಟ್ನಲ್ಲಿ ಪ್ರಯಾಣಿಸಬಹುದು. ಒಂದು ಕುಟುಂಬ ಮೂರು ಬಾರಿ ಪ್ರಯಾಣಿಸಿದರೆ ಅದರಲ್ಲಿ ಒಬ್ಬರಿಗೆ(ಒಂದು ಆಸನ) ಮಾತ್ರ ರಿಯಾಯ್ತಿ ಅವಕಾಶ. ಪ್ರತ್ಯೇಕ ಟಿಕೆಟ್ನಲ್ಲಿ ಮೂರು ಬಾರಿ ಪ್ರಯಾಣಿಸಿದರೆ ಪ್ರತ್ಯೊಬ್ಬರಿಗೂ ರಿಯಾಯ್ತಿ ಸಿಗುತ್ತದೆ. ಇದನ್ನು ಢಿಢಿಢಿ.್ಞಡ್ಠಡ್ಛಿ.್ಝಟಿನಲ್ಲಿ ಇ-ಬುಕ್ಕಿಂಗ್ ಅಥವಾ ಮೊಬೈಲ್ ಬುಕ್ಕಿಂಗ್ ಮೂಲಕ ಟಿಕೆಟ್ ಪಡೆಯಬಹುದು. ಪ್ರಯಾಣಕ್ಕೆ ಮಧ್ಯೆ ಟಿಕೆಟ್ ರದ್ದುಗೊಳಿಸಿದರೆ ಅಥವಾ ಮೂರು ಬಾರಿ ಪ್ರಯಾಣಿಸದಿದ್ದರೆ ಈ ಕೊಡುಗೆ ಲಭ್ಯವಾಗದು. ಯೋಜನೆ ಜುಲೈ 15ಕ್ಕೆ ಶುರುವಾದರೂ, ಕೆಎಸ್ಆರ್ಟಿಸಿ ವಿಳಂಬವಾಗಿ ಆಗಸ್ಟ್ ಒಂದರಿಂದ ಕರಪತ್ರ ಮೂಲಕ ಪ್ರಚಾರ ಕೈಗೊಂಡಿದೆ. ಹೀಗೆ ಅತೀ ಹೆಚ್ಚು ಬಾರಿ ಪ್ರಯಾಣಿಸಿದ 10 ಮಂದಿ ಪ್ರಯಾಣಿಕರಿಗೆ ನಿಗಮ ಸಾರಿಗೆಗಳಲ್ಲಿ ಒಂದು ಪ್ರಯಾಣಕ್ಕೆ ಪುರಸ್ಕಾರ ರೂಪದಲ್ಲಿ ಉಚಿತ ಟಿಕೆಟ್ ನೀಡಲಿದೆ.
ವಾರಾಂತ್ಯದಲ್ಲೂ ರಿಯಾಯ್ತಿ: ಇದಲ್ಲದೆ ವಾರಾಂತ್ಯ ಪ್ರಯಾಣದಲ್ಲಿ ಜನದಟ್ಟಣೆ ತಪ್ಪಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ವಾರದ ದಿನಗಳಲ್ಲಿ ಕಡಿಮೆ ಪ್ರಯಾಣ ದರ ಯೋಜನೆ ಪರಿಚಯಿಸಿದೆ. ಮಳೆಗಾಲದಲ್ಲಿ ಜುಲೈನಿಂದ ಸಪ್ಟೆಂಬರ್ವರೆಗೆ ಶೇ.15ರ ವರೆಗೆ ಟಿಕೆಟ್ ದರ ಕಡಿತ ಹೊರತೂ ಇದು ವಿಶೇಷ ಕೊಡುಗೆ.  ಕೊಡುಗೆ ಎಲ್ಲ ಕೌಂಟರ್ಗಳಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಸುವವರಿಗೆ ಲಭಿಸಲಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರದ ಪ್ರಯಾಣಕ್ಕೆ ಪ್ರಯಾಣ ದರದಲ್ಲಿ ಶೇ.10 ರಿಯಾಯ್ತಿ ಸಿಗಲಿದೆ. ಹೆಚ್ಚಿನ ಪ್ರಯಾಣಿಕರ ನಿರೀಕ್ಷೆ ಹಿನ್ನಲೆಯಲ್ಲಿ ಆ. 8, 14,15ರಂದು ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement