ದಿನವಿಡಿ ಮುಳುಗಿದ ಹೊಸಮಠ ಸೇತುವೆ
ಉಪ್ಪಿನಂಗಡಿ: ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ಹೆಚ್ಚು ಪ್ರಮಾಣದ ನೀರಿನ ಹರಿವು ಕಂಡು ಬಂದು ಉಪ್ಪಿನಂಗಡಿ- ಕಡಬ ರಸ್ತೆಯಲ್ಲಿನ ಹೊಸಮಠ ಸೇತುವೆ ಶನಿವಾರ ದಿನವಿಡೀ ನೆರೆನೀರಿನಿಂದ ಮುಳುಗಡೆಗೊಂಡು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶನಿವಾರ ಪರಿಸರದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಧ್ಯಾಹ್ನ ವೇಳೆಗೆ ಒಂದು ತಾಸು ನೆರೆನೀರು ಸೇತುವೆಯಿಂದ ಇಳಿಮುಖವಾದರೂ ಮತ್ತೆ ಮುಳುಗಡೆಗೊಂಡು ಸುಮಾರು 2 ಅಡಿಯಷ್ಟು ನೀರು ಸೇತುವೆಯ ಮೇಲ್ಭಾಗದಲ್ಲಿ ನಿಂತಿರುವ ಕಾರಣ ವಾಹನ ಸಂಚಾರ ಸಂಪೂರ್ಣ ತಡೆಹಿಡಿಯಲ್ಪಟ್ಟಿತ್ತು. ಯಾತ್ರಾರ್ಥಿಗಳು ಮತ್ತು ಪ್ರಯಾಣಿಕರು ಪರ್ಯಾಯ ರಸ್ತೆ ಅವಲಂಬಿಸಬೇಕಾಯಿತು.