ನಂದಿನಿ ನದಿಗೆ ಮರ ಕುಸಿತ; ಪ್ರವಾಹ ಸಾಧ್ಯತೆ
ಮೂಲ್ಕಿ: ಕೆಮ್ರಾಲ್ ಪಂಚಾಯಿತಿ ವ್ಯಾಪ್ತಿಯ ಪಂಜದ ಬಲಗುತ್ತುನಲ್ಲಿ ನದಿ ಸಮೀಪ ನಂದಿನಿ ನದಿಗೆ ಹಾಕಿದ್ದ ತಡೆಗೋಡೆ ಬಳಿಯಿದ್ದ ಬೃಹತ್ ಆಲದ ಮರ ಬುಡ ಸಮೇತ ಉರುಳಿ ಬಿದ್ದಿದ್ದು ಇದರಿಂದ ತಡೆಗೋಡೆಗೆ ಹಾನಿಯಾಗಿ ನೀರು ಒಳ ನುಗ್ಗಿ ನೆರೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಪರಿಸರದಲ್ಲಿ ನದಿಗೆ ಹಾಕಲಾಗಿದ್ದ ತಡೆಗೋಡೆ ಕುಸಿದು ನೀರು ನುಗ್ಗಿ ಕೃಷಿ ಭೂಮಿ ಜಲಾವೃತವಾಗಿ ಅಪಾರ ಹಾನಿಯಾಗಿತ್ತು. ಆಲದ ಮರ ತಡೆಗೋಡೆ ಸಮೀಪವಿದ್ದುದರಿಂದ ನೀರು ಒಳ ನುಗ್ಗಲು ತಡೆಗೋಡೆಯಂತೆ ತಡೆ ಉಂಟು ಮಾಡುತ್ತಿದ್ದು ಇದೀಗ ಮರವು ಉರುಳಿ ಬಿದ್ದಿರುವುದರಿಂದ ಮಣ್ಣು ನೆಲಸಮವಾಗಿದೆ. ಹಾಗೂ ತಡೆ ಗೋಡೆಯು ಬಿರುಕು ಬಿಟ್ಟಿರುವುದರಿಂದ ನೆರೆಯಾಗುವ ಸಾಧ್ಯತೆಯಿದ್ದು ತಡೆಗೋಡೆ ಸಮೀಪವಿರುವ ಬಲಗುತ್ತು ಸತೀಶ್ ಶೆಟ್ಟಿ ಹಾಗೂ ಜಗನ್ನಾಥ ದೇವಾಡಿಗರ ಮನೆಯು ಅಪಾಯದ ಅಂಚಿನಲ್ಲಿದೆ. ನೀರು ಒಳ ನುಗ್ಗಿದಲ್ಲಿ ಅಪಾರ ಪ್ರಮಾಣದ ಕೃಷಿ ಭೂಮಿಗೆ ಹಾನಿಯಾಗುವ ಸಾಧ್ಯತೆಯಿದೆ.