ಸುದ್ದಿ ಸಂಕ್ಷೇಪ
ಮಂಜುನಾಥಲತಾಗೆ ಡಾ.ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ
ಕುಂದಾಪುರ: ಡಾ.ಎಚ್. ಶಾಂತಾರಾಮ್ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿಯು ಮಂಜುನಾಥಲತಾ ಅವರ 'ಕತೆ ಎಂಬ ಇರಿವ ಈ ಅಲಗು' ಕಥಾ ಸಂಕಲನಕ್ಕೆ ದೊರೆತಿದೆ. ಪತ್ರಕರ್ತರಾಗಿರುವ ಮಂಜುನಾಥಲತಾ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 13ರಂದು ಪ್ರಶಸ್ತಿ ಪ್ರದಾನ: ಪ್ರಶಸ್ತಿಯು ಹದಿನೈದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಆ.13ರಂದು ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯ ನಿರ್ಣಾಯಕರಾಗಿ ಲೇಖಕರಾದ ಬೆಳಗೋಡು ರಮೇಶ್ ಭಟ್, ಡಾ.ಎಚ್.ಎಸ್. ಅನುಪಮಾ ಹಾಗೂ ಡಾ. ಅಮರೇಶ್ ನಗಡೋಣಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಕಾಂತಾವರ: 11ರಂದು ತಿಂಗಳ ಸರಣಿ
ಕಾಂತಾವರ: ಇಲ್ಲಿನ ಕನ್ನಡ ಸಂಘದ ವತಿಯಿಂದ 'ಸಾಹಿತ್ಯ ಸಂಸ್ಕೃತಿ ಸಂವರ್ಧನ ನುಡಿನಮನ- 68' ತಿಂಗಳ ಸರಣಿ ಕಾರ್ಯಕ್ರಮ ಆ.11ರಂದು ಮಧ್ಯಾಹ್ನ 2ರಿಂದ ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ. ಕೆ.ಎಸ್. ನಿರಂಜನ (ಕುಳಕುಂದ ಶಿವರಾವ್) ಅವರ ಕಾದಂಬರಿ 'ಚಿರಸ್ಮರಣೆ' ಕುರಿತು ರವೀಂದ್ರ ಭಟ್ ಐನಕೈ ಮಾತನಾಡಲಿದ್ದಾರೆ. ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಮುಕುಂದ ಹ. ಕುಲಕರ್ಣಿ ಮತ್ತು ಸಂಗಡಿಗರಿಂದ ಡಾ. ಬೆಟಗೇರಿ ಕೃಷ್ಣ ಶರ್ಮರ ಹಾಡುಗಳ ಗೀತಗಾಯನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತಡೆಗೋಡೆ ಕುಸಿತ
ಸುಳ್ಯ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂದೆ ನಗರ ಪಂಚಾಯಿತಿ ನಿರ್ಮಿಸಿದ ತಡೆಗೋಡೆ, ಪಕ್ಕದಲ್ಲಿರುವ ಕೂಲ್‌ಪಾರ್ಕ್ ಮಳಿಗೆಯ ಜನರೇಟರ್ ಮೇಲೆ ಜರಿದು ಜನರೇಟರ್‌ಗೆ ಹಾನಿಯಾಗಿದೆ.