ಗ್ರಾಪಂ ಉಪಚುನಾವಣೆ: ಪುತ್ತೂರು ತಾಲೂಕಲ್ಲಿ ಶೇ.61.99 ಮತದಾನ
ಪುತ್ತೂರು: ತಾಲೂಕಿನ 4 ಗ್ರಾಮ ಪಂಚಾಯ್ತಿಯ ತೆರವಾಗಿದ್ದ 5 ಸ್ಥಾನಗಳಿಗೆ ನಡೆದ ಉಪಚುನಾವಣೆ ಭಾನುವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, 6388 ಮತದಾರರ ಪೈಕಿ 1951 ಪುರುಷರು ಮತ್ತು 2009 ಮಹಿಳೆಯರು ಸೇರಿ ಒಟ್ಟು 3960 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟು ಶೇ.61.99 ಮತದಾನವಾಗಿದೆ. ಕಬಕ ಗ್ರಾಮ ಪಂಚಾಯ್ತಿಯ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ 1298 ಮತದಾರರ ಪೈಕಿ 366 ಪುರುಷರು, 400 ಮಹಳೆಯರು ಸೇರಿದಂತೆ ಒಟ್ಟು 766 ಮಂದಿ ಮತ ಚಲಾಯಿಸಿದ್ದು, ಶೇ.59.01 ಮತದಾನವಾಗಿದೆ. ಕಾಣಿಯೂರು ಗ್ರಾ.ಪಂ.ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 1096 ಮತದಾರರ ಪೈಕಿ 357 ಪುರುಷರು ಹಾಗೂ 329 ಮಹಿಳೆಯರು ಸೇರಿದಂತೆ ಒಟ್ಟು 686 ಮಂದಿ ಮತ ಚಲಾಯಿಸಿದ್ದಾರೆ. ಇಲ್ಲಿ ಶೇ. 62.59 ಮತದಾನವಾಗಿದೆ. ಸವಣೂರು ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ 1519 ಮತದಾರರಲ್ಲಿ 440 ಮಂದಿ ಪುರುಷರು ಹಾಗೂ 459 ಮಹಿಳೆಯರು ಸೇರಿದಂತೆ 899 ಮಂದಿ ಮತ ಚಲಾಯಿಸಿದ್ದಾರೆ. ಇಲ್ಲಿ ಶೇ59.18 ಮತದಾನವಾಗಿದೆ. ಅರಿಯಡ್ಕ ಗ್ರಾಮ ಪಂಚಾಯಿತಿಯ 2 ವಾರ್ಡ್ಗಳಿಗೆ ನಡೆದ ಉಪ ಚುನಾವಣೆಯಲ್ಲಿ 2475 ಮಂದಿ ಮತದಾರರ ಪೈಕಿ 788 ಪುರುಷರು ಹಾಗೂ 821 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 1609 ಮಂದಿ ಮತ ಚಲಾಯಿಸಿದ್ದು ಶೇ. 65.01 ಮತದಾನವಾಗಿದೆ.
ಬೆಳ್ತಂಗಡಿಯಲ್ಲಿ
ಶೇ.61 ಮತದಾನ
ಬೆಳ್ತಂಗಡಿ: ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ನಡೆದ ಉಪಚುನಾವಣೆಯಲ್ಲಿ ಶೇ.61 ರಷ್ಟು ಮತದಾನವಾಗಿದೆ. ಧರ್ಮಸ್ಥಳ ಮತ್ತು ಕಳಿಯ ಗ್ರಾಮ ಪಂಚಾಯ್ತಿಗಳ ತಲಾ ಒಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯೆಯಾಗಿದ್ದಾರೆ. ಉಳಿದಂತೆ ಉಜಿರೆ, ಅಳದಂಗಡಿ ಪಂಚಾಯ್ತಿನ ತಲಾ ಒಂದು, ಮಾಲಾಡಿ ಪಂಚಾಯ್ತಿನ 2 ಸ್ಥಾನಗಳಿಗೆ ಆದಿತ್ಯವಾರ ಶಾಂತಿಯುತ ಮತದಾನ ನಡೆದಿದೆ. ಆ.7 ರಂದು ಮತ ಎಣಿಕೆ ನಡೆಯಲಿದೆ.
ಸಂಚಾರ ಸಂಚಕಾರ!
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಕೈಕಂಬ- ಸುಬ್ರಹ್ಮಣ್ಯ ರಸ್ತೆಯ ಮಧ್ಯೆ ವೆಂಕಟಾಪುರ ಎಂಬ ತಿರುವಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ಡಾಂಬರೀಕರಣ ರಸ್ತೆಯಲ್ಲಿ, ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಸವಾರರು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಿಬೇಕಿದೆ. ತಿರುವಿನಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿ ಸಂಚರಿಸುವ ವಾಹನಗಳು ಹೊಂಡಕ್ಕೆ ಬಿದ್ದು ಅಪಘಾತ ಸಂಭವಿಸಿ ಜೀವ ಹಾನಿ ಆಗುವ ಸ್ಥಿತಿ ತಲೆದೋರಿದೆ. ಕಳಪೆ ಕಾಮಗಾರಿಯಿಂದ ಇಲ್ಲಿ ಗುಂಡಿ ನಿರ್ಮಾಣವಾಗಿದ್ದು ಈ ಹಿಂದೆ ಈ ತಿರುವುನಲ್ಲಿ ಹಲವು ಬಾರಿ ಅಪಘಾತ ಸಂಭವಿಸಿ ಜೀವ ಹಾನಿಯಾದ ಘಟನೆ ನಡೆದಿದೆ. ತೀವ್ರ ತಿರುವು ಇದ್ದ ಕಾರಣ ಇಲ್ಲಿ ಅಪಘಾತ ಹೆಚ್ಚಾಗಿ ಸಂಭವಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ನೀಡುವ ನಾಮಫಲಕ ಹಾಕಿದ್ದಲ್ಲಿ ಸಂಚಾರಕ್ಕೆ ಅನುಕೂಲ ಆಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದಲ್ಲಿ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ರಸ್ತೆ ದುರಸ್ಥಿತಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
ಮೂಲ್ಕಿ ನಿಲ್ದಾಣ ಕೆಸರುಮಯ
ಮೂಲ್ಕಿ: ಇಲ್ಲಿನ ಬಸ್ ನಿಲ್ದಾಣ ಬಳಿ ರಸ್ತೆಯ ದೊಡ್ಡ ಹೊಂಡಗಳಿಗೆ ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಕೆಂಪು ಕಲ್ಲು ಹಾಕಿ ತುಂಬಿಸುವ ಕಾರ್ಯ ನಡೆದಿದ್ದು, ನಿರಂತರ ಮಳೆಯಿಂದಾಗಿ ರಸ್ತೆ ಕೆಸರಿನಿಂದ ಆವೃತವಾಗಿ ಸಂಚಾರಕ್ಕೆ ಅಸಾಧ್ಯವಾದ ಪರಿಸ್ಥಿತಿ ತಲೆದೋರಿದೆ.
ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳಿಂದ ಕೆಸರಿನ ಸಿಂಚನವಾಗಿ ನಾಗರಿಕರು ಹಿಡಿಶಾಪ ಹಾಕುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಈ ಬಗ್ಗೆ ಬುಧವಾರ ನಪಂ ಸಭೆಯಲ್ಲಿ ಚರ್ಚೆಯಾಗಿ, ಮಣ್ಣಿನ ಮೇಲೆ ಜಲ್ಲಿ ಹುಡಿ ಹಾಕುವುದಾಗಿ ಹೇಳಿದ್ದರೂ ಈವರೆಗೆ ಹಾಕಿಲ್ಲ.
ವಿದ್ಯಾರ್ಥಿ ಬಿಡುಗಡೆಗೆ
ಆಗ್ರಹಿಸಿ ಇಂದು
ಅಭಾವಿಪ ಪ್ರತಿಭಟನೆ
ಮಂಗಳೂರು: ಉಪ್ಪಿನಂಗಡಿ ಕಾಲೇಜ್ ವಿದ್ಯಾರ್ಥಿ ರಂಜಿತ್ ಮೇಲೆ ಸುಳ್ಳು ಮೊಕದ್ದಮೆ ಬಂಧಿಸಲಾಗಿದ್ದು, ಬಿಡುಗಡೆಗೆ ಒತ್ತಾಯಿಸಿ ಎಬಿವಿಪಿ ಆ.5ರಂದು ಪ್ರತಿಭಟನೆ ನಡೆಸಲಿದೆ. ಬೆಳಗ್ಗೆ 11 ಗಂಟೆಗೆ ಜ್ಯೋತಿ ವೃತ್ತದಿಂದ ಹಂಪನಕಟ್ಟೆ ಮೂಲಕ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅಮಾಯಕನ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಚಾಲಕ ಹರಿಪ್ರಸಾದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಾಲಕ ಇದ್ದಿಕುಂಞ
ಪಡಿಕಲ್ ನಿಧನ
ಮಂಗಳೂರು: ಡಿಜಿಕಟ್ಟೆ ಮುಳ್ಳುವಳಚ್ಚಿಲ್ ನಿವಾಸಿ ಇದ್ದಿಕುಂಞ ಪಡಿಕಲ್ (85) ಶುಕ್ರವಾರ ನಿಧನರಾದರು. ಚಾಲಕರಾಗಿದ್ದ ಅವರು ಡ್ರೈವರ್ ಪೊಡಿಚ್ಚ ಎಂದೇ ಹೆಸರಾಗಿದ್ದರು. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ, ಇಬ್ಬರು, ಪುತ್ರರು, ಪುತ್ರಿಯರು ಇದ್ದಾರೆ.