ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ಪೀಕರ್ ಕಾಗೋಡು ಪ್ರತಿಕೃತಿ ದಹನ, ಕ್ಷಮೆಯಾಚನೆಗೆ ಶ್ರೀರಾಮಸೇನೆ ಆಗ್ರಹ

Lingaraj Badiger
Updated On : 6 Aug 2013, 12:39 pm

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲ ರಾಣಿ ಅಬ್ಬಕ್ಕ ಕುರಿತು ಲಘುವಾಗಿ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾಗೋಡು ಪ್ರತಿಕೃತಿ ದಹಿಸಿದರು.
 ಈ ಸಂದರ್ಭ ಮಾತನಾಡಿದ ಸೇನೆ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೇಮಾರ್, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ ರಾಣಿ ಅಬ್ಬಕ್ಕ. ಅಂಥ ದಿಟ್ಟ ಮಹಿಳೆಯನ್ನು ಯಾರವಳು ಎಂದು ಪ್ರಶ್ನಿಸಿರುವುದು ಸ್ಪೀಕರ್ ಘನತೆಗೆ ತಕ್ಕುದಲ್ಲ. ವೀರಾವೇಶದಿಂದ ಪೋರ್ಚ್‌ಗೀಸರನ್ನು ಸದೆಬಡಿದ ಅಬ್ಬಕ್ಕಳನ್ನು ಅವಮಾನ ಮಾಡಿರುವುದರಿಂದ ತುಳುನಾಡಿಗರೆಲ್ಲರ ಮನಸ್ಸಿಗೆ ನೋವಾಗಿದೆ. ತಕ್ಷಣ ರಾಜಿನಾಮೆ ನೀಡಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
 ರಾಣಿ ಅಬ್ಬಕ್ಕ ಅವರಿಗೆ ಅವಮಾನವಾಗುತ್ತಿದ್ದರೆ ಸದನದಲ್ಲಿದ್ದ ಈ ಭಾಗದ ಶಾಸಕರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಮಂಗಳೂರು ವಿಧಾನ ಸಭೆ ಕ್ಷೇತ್ರ ಪ್ರತಿನಿಧಿಸುವ ಯು.ಟಿ. ಖಾದರ್ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾಗಿದ್ದು ಸದನದಲ್ಲಿದ್ದರೂ ಸೊಲ್ಲೆತ್ತದಿರುವುದು ಊರಿನ ಬಗ್ಗೆ ಇಲ್ಲಿನ ಜನರ ಕುರಿತು ಕಾಳಜಿ ಇಲ್ಲ ಎಂಬುದನ್ನು ಎತ್ತಿ ತೋರಿಸಿದೆ ಎಂದರು. ಜೀವನ್ ನೀರುಮಾರ್ಗ, ಮಹೇಶ್ ಭಟ್, ಗಣೇಶ್ ಅತ್ತಾವರ, ಮಹೇಶ್ ಪದವಿನಂಗಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
--
ನಿಡ್ಡೋಡಿ ಸ್ಥಾವರ ವಿರುದ್ಧ ಹೋರಾಟ: ಕಟೀಲು ದೇವಳದಲ್ಲಿ ಗ್ರಾಮಸ್ಥರ ಪ್ರಮಾಣ
ಮೂಲ್ಕಿ: ಯಾವುದೇ ಬೆಲೆ ತೆತ್ತಾದರೂ ಕಟೀಲು ದೇವಳ, ನಂದಿನಿ ನದಿ, ಅಪಾರ ಕೃಷಿ ಭೂಮಿಯನ್ನು ಉಳಿಸಲು ನಿಡ್ಡೋಡಿ ಸ್ಥಾವರದ ವಿರುದ್ಧ ಹೋರಾಟ ಮಾಡುವುದಾಗಿ ಸ್ಥಳೀಯರು ಕಟೀಲು ದೇವಳದಲ್ಲಿ ಭಾನುವಾರ ಪ್ರಮಾಣ ಮಾಡಿದರು.
 ನಿಡ್ಡೋಡಿಯಲ್ಲಿ ಸುಮಾರು 2,000 ಎಕ್ರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸುಮಾರು 4,000 ಮೆಗಾ ವ್ಯಾಟ್‌ನ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದ್ದು, ಭಾನುವಾರ ಕಟೀಲಿನಲ್ಲಿ ಜರಗಿದ ಬೃಹತ್ ಸಭೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಪಕ್ಷಬೇಧ ಮರೆತು ಇದರ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಇಂದು ಸಮಾಲೋಚನಾ ಸಭೆ: ಹೋರಾಟದ ಕುರಿತು ಮಂಗಳವಾರ ಸಂಜೆ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಮುಂದಿನ ವಾರದಲ್ಲಿ ನಿಡ್ಡೋಡಿಯ ಬಂಗೇರ ಪದವಿನಲ್ಲಿ ಸಭೆಯನ್ನು ಸ್ಥಾವರದಿಂದ ಆಗುವ ಅನಾಹುತದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕಾರ್ಯ ನಡೆಯಲಿದ್ದು, ಹೋರಾಟಕ್ಕೆ ಅರ್ಚಕರ ಸಮಿತಿ, ಭಕ್ತರ ಸಮಿತಿ ಹಾಗೂ ಗ್ರಾಮಸ್ಥರ ಸಮಿತಿ ರಚಿಸುವ ಬಗ್ಗೆ ನಿರ್ಧರಿಸಲಾಯಿತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement