ಕೊಯನಾಡು: ರಾಜ್ಯ ಹೆದ್ದಾರಿ ಮತ್ತಷ್ಟು ಕುಸಿತ
ಸುಳ್ಯ: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಯನಾಡು ಬಳಿಯ ಗಾರೆಮುರಿ ಎಂಬಲ್ಲಿ ರಸ್ತೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಮಂಗಳವಾರ ವೇಳೆಗೆ, ರಾಜ್ಯ ಹೆದ್ದಾರಿ ಮತ್ತಷ್ಟು ಕುಸಿತಗೊಂಡಿದ್ದು ನಡೆದು ಹೋಗಲೂ ಕಷ್ಟವಾಗುವಂತೆ ಮಾರ್ಗ ತುಂಡರಿಸಲ್ಪಟ್ಟಿದೆ.
ದ್ವಿಚಕ್ರ ವಾಹನ ಸಂಚಾರವೂ ಅಸಾಧ್ಯ: ಸೋಮವಾರ ಬೆಳಗ್ಗೆ ಇಲ್ಲಿ 200 ಮೀಟರ್ವರೆಗೆ ರಸ್ತೆಯು ಮೂರರಿಂದ ಐದು ಅಡಿಗಳಷ್ಟು ಬಿರುಕು ಬಿಟ್ಟ ಹಿನ್ನಲೆಯಲ್ಲಿ ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಹೋಗಲು ಸ್ಥಳಾವಕಾಶವಿತ್ತು. ಆದರೆ ಮುಂದುವರಿದ ಮಳೆಗೂ ರಸ್ತೆ ಮತ್ತಷ್ಟು ಕುಸಿದಿದ್ದು ದ್ವಿಚಕ್ರ ವಾಹನಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಎಲ್ಲ ವಾಹನಗಳನ್ನು ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಾದಚಾರಿಗಳಿಗೆ ನಡೆದು ಹೋಗಲೂ ಕಷ್ಟವಾಗುತ್ತಿದೆ. ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ತೆರಳಬೇಕಾದ ಮತ್ತು ಈ ದಾರಿಯಲ್ಲಿ ಮಂಗಳೂರಿಗೆ ಬೇಕಾದ ವಾಹನಗಳು ಹಾಸನ, ಸಕಲೇಶಪುರ ಮಾರ್ಗವಾಗಿ ಸಂಚರಿಸಬೇಕಾಗಿದೆ.
ಮಡಿಕೇರಿ-ಸುಳ್ಯ ನಡುವೆ ಸಂಚರಿಸುವವರಿಗೂ ಕಷ್ಟವಾಗಿದೆ. ಮಡಿಕೇರಿ-ಕೊಯನಾಡು, ಕೊಯನಾಡು- ಸುಳ್ಯ ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು ರಸ್ತೆ ಸಂಪರ್ಕ ಕಡಿತದ ಬಗ್ಗೆ ಸರಿಯಾಗಿ ಮಾಹಿತಿ ದೊರೆಯದೆ ಕಷ್ಟ ಪಡುತ್ತಿದ್ದಾರೆ. ಕಳೆದ ಬಾರಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಯ ಸಂದರ್ಭ ರಸ್ತೆ ಬಂದ್ ಆಗಿದ್ದಾಗ ಸುಳ್ಯ- ಪಾಣತ್ತೂರು- ಕರಿಕೆ- ಭಾಗಮಂಡಲ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸಲಾಗಿತ್ತು. ಆದರೆ ಸುಳ್ಯ- ಆಲೆಟ್ಟಿ- ಬಡ್ಡಡ್ಕ- ಪಾಣತ್ತೂರು ರಸ್ತೆ ತೀರಾ ಹದಗೆಟ್ಟಿರುವುದರಿಂದ ಸಂಚಾರ ಕಷ್ಟವಾಗಿದೆ.
ಕಾರಣವೇನು...?
ಧಾರಾಕಾರ ಮಳೆ ಹಾಗೂ ಸಮೀಪದಲ್ಲೇ ನದಿ ತುಂಬಿ ಹರಿಯುತ್ತಿರುವುದರಿಂದ ಕೊಯನಾಡು ರಸ್ತೆಯಲ್ಲಿ ಬಿರುಕು ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ದಿನೇ ದಿನೇ ಕುಸಿತದ ಪ್ರಮಾಣ ಏರುತ್ತಿರುವುದರಿಂದ ಈ ಭಾಗದಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಮಂಗಳವಾರ ಕೆಆರ್ಡಿಸಿಎಲ್ನ ಪರಿಣತರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸ್ಥಿತಿಗತಿ ಪರಿಶೀಲಿಸಿದ್ದಾರೆ. ಇವರು ನೀಡುವ ತಾಂತ್ರಿಕ ವರದಿ ಪ್ರಕಾರ ರಸ್ತೆ ಕಾಮಗಾರಿ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.