ಕೊಳೆರೋಗದಿಂದ ಕಳೆಗುಂದಿದ ಅಡಕೆ
ಸುಳ್ಯ: 'ಈ ಬಾರಿ ತೋಟ ಹೋದ ಹಾಗೆಯೇ...'
- ಸುಳ್ಯ ಪರಿಸರದ ಯಾವ ಕೃಷಿಕರೇ ಆಗಲಿ ಪರಸ್ಪರ ಎದುರಾದರೆ ಇಂತಹದೊಂದು ಮಾತು ಬಂದೇ ಬರುತ್ತದೆ.
ಯಾಕೆಂದರೆ ಸುಳ್ಯ ತಾಲೂಕಿನ ಅಡಕೆ ಬೆಳೆಗಾರನ ಸ್ಥಿತಿ ಈ ಬಾರಿ ಇದೇ ಆಗಿದೆ.
ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ಸುರಿಯುತ್ತಿರುವ ನಿರಂತರ ವರ್ಷಧಾರೆಗೆ ಅಡಕೆ ಬೆಳೆಗಾರನ ಬದುಕು ಹೈರಾಣಾಗಿದೆ.
ಪ್ರಧಾನ ಬೆಳೆ: ಸುಳ್ಯ ತಾಲೂಕಿನ ಮಟ್ಟಿಗೆ ಅಡಕೆ ಪ್ರಧಾನ ಬೆಳೆ. ಸುಮಾರು 8116 ಹೆಕ್ಟೇರ್ಗಳಲ್ಲಿ 5725 ಕ್ವಿಂಟಾಲ್ಗಳಷ್ಟು ಅಡಕೆ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ಈ ಬಾರಿ ಅಡಕೆಗೆ ಒಳ್ಳೆಯ ಧಾರಣೆಯೂ ಸಿಕ್ಕಿದೆ. ಹಿಗಾಗಿ ಕಳೆದ ಅನೇಕ ವರ್ಷಗಳಿಂದ ಈ ಬಾರಿ ಅಡಕೆ ಕೃಷಿಕರು ಹೆಚ್ಚು ನೆಮ್ಮದಿಯಿಂದಿದ್ದರು.
ಆದರೆ ಮೇ ಅಂತ್ಯದಿಂದ ಅವಧಿ ಪೂರ್ಣವಾಗಿ ಬಂದ ಮತ್ತು ಈಗಲೂ ಎಡೆ ಬಿಡದೆ ಸುರಿಯುತ್ತಿರುವ ಮಳೆ ಕೃಷಿಕನ ನೆಮ್ಮದಿಗೆ ಭಂಗ ತಂದಿದೆ. ಮಳೆಗಾಲದ ಆರಂಭದಲ್ಲಿ ಅಡಕೆ ಕೃಷಿಕರು ತೋಟಕ್ಕೆ ಔಷಧಿ ಸಿಂಪಡಿಸುತ್ತಾರೆ. ಆ ಮೂಲಕ ತೋಟಕ್ಕೆ ಬರುವ ರೋಗವನ್ನು ತಡೆಗಟ್ಟುತ್ತಾರೆ. ಆದರೆ ಈ ಬಾರಿ ಈ ಔಷಧಿ ಸಿಂಪಡಣೆಗೆ ಮಳೆ ಅವಕಾಶವನ್ನೇ ಮಾಡಿಕೊಟ್ಟಿಲ್ಲ.
ಕೊಳೆ ರೋಗ: ಮಳೆ ನಿರಂತರವಾಗಿ ತನ್ನ ಪ್ರತಾಪ ಹೆಚ್ಚಿಸಿಕೊಂಡಿತೆ ವಿನಹ ಔಷಧಿ ಸಿಂಪಡಣೆಗೆ ವಿರಾಮ ಕೊಡಲಿಲ್ಲ. ಪರಿಣಾಮ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಈ ಬಾರಿ ಮಳೆಗಾಲದ ಆರಂಭದ ಸಮಯದಲ್ಲಿ ಹಲವು ಕೃಷಿಕರು ಅಡಕೆ ತೋಟಗಳಿಗೆ ಬಯೋಫೈಟ್ ಸಿಂಪಡಿಸಿದ್ದರು. ಆದರೆ ಅದು ಕೂಡ ಸಮರ್ಪಕವಾಗಿ ಆಗಲಿಲ್ಲ. ಕೊಳೆರೋಗ ತಡೆಗಟ್ಟುವ ಸಲುವಾಗಿ ಈ ಭಾಗದಲ್ಲಿ ಪಾರಂಪರಿಕವಾಗಿ ಕೃಷಿಕರು ಅಳವಡಿಸಿಕೊಂಡು ಬಂದದ್ದು ಮೈಲುತುತ್ತು ಮತ್ತು ಸುಣ್ಣದ ಸಿಂಪಡಣೆ. ಅದಕ್ಕಾಗಿ ಕನಿಷ್ಠ ಒಂದು ದಿನವಾದರೂ ಮಳೆಗೆ ಬಿಡುವು ಬೇಕು. ಅಲ್ಪಸ್ವಲ್ಪವಾದರೂ ಬಿಸಿಲು ಕಾಯಬೇಕು.
ಉದುರುತ್ತಿದೆ: ಆದರೆ ಈ ಬಾರಿ ಅಂತಹ ದಿನಗಳೇ ಬಂದಿಲ್ಲದ ಕಾರಣ ರೋಗದ ಶಿಲೀಂಧ್ರಗಳು ಅಡಕೆ ಗೊನೆಗೆ ಬಾಧಿಸಿ ತೋಟಗಳಲ್ಲಿ ಅಡಕೆ ಉದುರತೊಡಗಿದೆ.
ಮಳೆ ಆರಂಭವಾಗುವುದಕ್ಕೂ ಮೊದಲೇ ಕೆಲವೆಡೆ ಬಿಸಿಲ ಧಗೆಯಿಂದ ಎಳೆ ಅಡಕೆ ಉದುರ ತೊಡಗಿತ್ತು. ಇದೀಗ ನಿರಂತರ ಮಳೆಯಿಂದಾಗಿ ಕಾಯಿ ಅಡಕೆ ರಾಶಿಗಟ್ಟಲೆ ತೋಟಗಳಲ್ಲಿ ಬೀಳುತ್ತಿವೆ.
ಔಷಧಿ ಸಿಂಪಡಿಸದ ಕಾರಣ ರೋಗ ಬಹುತೇಕ ಎಲ್ಲ ತೋಟಗಳಿಗೂ ವ್ಯಾಪಿಸತೊಡಗುತ್ತಿದೆ. ಇನ್ನೊಂದೆರಡು ಬಿಸಿಲು ಕಾಯುವಷ್ಟರಲ್ಲಿ ಎಲ್ಲ ಅಡಕೆಯು ಬುಡದಲ್ಲಿ ಬಿದ್ದಿರುತ್ತದೆ.
ಹಿಗಾಗಿ ಈ ಬಾರಿ ಅಡಕೆ ಇಳುವರಿ ಬಹುತೇಕ ಕುಸಿತ ಕಾಣುವುದರಲ್ಲಿ ಸಂಶಯವಿಲ್ಲ. ಮತ್ತೊಂದೆಡೆ ತೋಟದಲ್ಲಿ ಔಷಧಿ ಸಿಂಪಡಿಸಲು, ಇತರ ಕೆಲಸ ಕಾರ್ಯಮಾಡಲು ಕೂಲಿ ಕಾರ್ಮಿಕರ ಕೊರತೆಯೂ ಇದೆ.
ಈ ಎಲ್ಲ ಸನ್ನಿವೇಶಗಳನ್ನು ಕಲ್ಪಿಸಿಕೊಂಡೇ ಇಲ್ಲಿನ ಅಡಕೆ ಕೃಷಿಕರು ಆತಂಕಕ್ಕೆ ಈಡಾಗಿದ್ದಾರೆ.
ಗಾಯದ ಮೇಲೆ ಬರೆ...
ಇಲ್ಲಿನ ಅಡಕೆ ಬೆಳೆಗಾರ ಯಾವತ್ತೂ ನೆಮ್ಮದಿಯಿಂದ ಇರುವಂತಿಲ್ಲ ಎನ್ನುವುದು ಕಾಲ ಕಂಡುಕೊಂಡ ಸತ್ಯ. ಒಂದೊಮ್ಮೆ ಚಿನ್ನದ ಬೆಳೆಯಾಗಿದ್ದ ಅಡಕೆಯ ಧಾರಣೆ ಮತ್ತೆ ಪಾತಾಳಕ್ಕೆ ಇಳಿದದ್ದು ಈಗ ಇತಿಹಾಸ. ಬಳಿಕ ಬೆಳೆಗೆ ಕೊಂಚ ಧಾರಣೆ ಹೆಚ್ಚುತ್ತಿದ್ದಂತೆ ತಾಲೂಕಿನ ಹಲವು ಕಡೆ ಅಡಕೆಗೆ ಹಳದಿ ರೋಗ ಭಾದಿಸಿ ಎಕರೆಗಟ್ಟಲೆ ತೋಟವನ್ನು ಆಪೋಶನ ತೆಗೆದುಕೊಂಡಿತ್ತು. ಕೆಲವು ಕಡೆ ಬೇರು ಹುಳದ ಭಾದೆಯೂ ಕಾಣಿಸಿಕೊಂಡಿತ್ತು. ಕೊಳೆರೋಗವಂತೂ ಪ್ರತಿವರ್ಷವೂ ಕರೆಯದೇ ಬರುವ ಅತಿಥಿ. ಆದರೆ ಈ ಬಾರಿಯಂತೂ ಇದು ತೋಟಕ್ಕೆ ತೋಟವನ್ನೇ ನಾಶಮಾಡುವಂತೆ ಗಂಭೀರ ಪ್ರಮಾಣದಲ್ಲಿದೆ. ಅಡಕೆ ಮಾತ್ರವಲ್ಲದೆ ಕೊಕ್ಕೋ, ಕಾಳುಮೆಣಸು, ಬಾಳೆ ಕೃಷಿ ಕೂಡ ನಿರಂತರ ಮಳೆಗೆ ತತ್ತರಿಸಿದೆ. ಮಾಡಿದ ಸಾಲ ತೀರಿಸಲಾಗದೆ, ಬೆಳೆಸಾಲ ಪಡೆಯಲೂ ಆಗದೆ ಕೃಷಿಕರ ಬದುಕು ದಯನೀಯವಾಗಿದೆ. ಕೊಳೆರೋಗದ ಹೆಸರಿನಲ್ಲಿ ಪರಿಹಾರಕ್ಕಾಗಿ ಅರ್ಜಿ ಸ್ವೀಕರಿಸಿ ಸುಮ್ಮನಿರುವ, ಅಡಕೆಯ ಹೆಸರಿನಲ್ಲಿ, ರಾಜಕಾರಣ ಮಾಡುವ ಮಂದಿ ಅಪ್ಪಟ ಮನುಷ್ಯರಾಗಿ ಕೃಷಿಕರ ಕಷ್ಟಕ್ಕೆ ಮರುಗುವರೇ ಎಂದು ಕಾದುನೋಡಬೇಕಾಗಿದೆ.