ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗೋ ಡಕಾಯಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಆಂದೋಲನ

Vishwanath S
Updated On : 7 Aug 2013, 11:22 am

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಿರಂತರ ಹೆಚ್ಚುತ್ತಿರುವ ಗೋಹತ್ಯೆ ಮತ್ತು ಜಾನುವಾರು ಡಕಾಯಿತಿ ಪ್ರಕರಣಕ್ಕೆ ಕಡಿವಾಣ ಹಾಕದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದಾಗಿ ದ.ಕ.ಬಿಜೆಪಿ ಎಚ್ಚರಿಕೆ ನೀಡಿದೆ. ಇದೇ ವೇಳೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸದ ಜಿಲ್ಲೆಯ ಸಚಿವರ ವಿರುದ್ಧ ಹರಿಯಾಯ್ದಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಕ್ತಾರ, ವಿಧಾನಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಸಂವಿಧಾನದ ಪರಿಚ್ಛೇದ 44ರ ಆಶಯದಂತೆ ಗೋಹತ್ಯೆ ನಿಷೇಧ ಮಸೂದೆ ತಿದ್ದುಪಡಿಗೆ ಎರಡು ಸದನ ಒಪ್ಪಿಗೆ ನೀಡಿತ್ತು. ಆದರೆ ರಾಜ್ಯಪಾಲರ ಅಂಕಿತಕ್ಕೆ ತಡೆ ಉಂಟಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಮಸೂದೆ ವಿರುದ್ಧ ಧ್ವನಿ ಎತ್ತಿತ್ತು. ಇದರಿಂದಾಗಿಯೇ ಗೋ ಡಕಾಯಿತಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಖಾದರ್‌ಗೆ ತಿರುಗೇಟು: ಗೋ ಕಳ್ಳಸಾಗಣೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಬಹಿರಂಗವಾಗಿ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಜಿಲ್ಲೆಯವರೇ ನಾಲ್ವರು ಮಂತ್ರಿಗಳಿದ್ದರೂ ಗೋ ಕಳ್ಳಸಾಗಣೆ ತಡೆಯಾಗಿಲ್ಲ. ತಡೆಯಲು ಬಂದವರ ಮೇಲೆ ಒತ್ತಡ, ದಬ್ಬಾಳಿಕೆ ನಡೆಯುತ್ತಿದೆ. ಹೀಗಿರುವಾಗ ಪೊಲೀಸರು ವಿಫಲ ಎಂದು ಆರೋಪಿಸಿಸುವ ಬದಲು ನೇರವಾಗಿ ಯಾಕೆ ಕ್ರಮಕೈಗೊಳ್ಳುವ ಅಧಿಕಾರ ನೀಡಬಾರದು ಎಂದು ಪ್ರಶ್ನಿಸಿದ ಮೋನಪ್ಪ ಭಂಡಾರಿ, ಗೋಕಳ್ಳರ ವಿರುದ್ಧ ದರೋಡೆ ಕೇಸ್ ಹಾಕುವಂತೆ ಸೂಚಿಸಲಿ ಎಂದರು. ಅದು ಬಿಟ್ಟು ಈ ರೀತಿ ಬಿಟ್ಟಿ ಪ್ರಚಾರದ ತಂತ್ರ ಖಾದರ್ ಅನುಸರಿಸುವುದು ಬೇಡ ಎಂದು ಮೋನಪ್ಪ ಭಂಡಾರಿ ಹೇಳಿದರು. ಜಿಲ್ಲೆಯಲ್ಲಿ ಗೋ ಸಾಗಾಟ ಮುಂದುವರಿದು ಸಮಾಜದಲ್ಲಿ ಅಶಾಂತಿ ಉಂಟಾದರೆ ಅದಕ್ಕೆ ಸಚಿವರೇ ಕಾರಣ ಎಂದು ಆರೋಪಿಸಿದರಲ್ಲದೆ, ಸಾಧ್ಯವಾದರೆ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಮುಖಂಡರಾದ ಪದ್ಮನಾಭ ಕೊಟ್ಟಾರಿ, ಪುಷ್ಪಲತಾ ಗಟ್ಟಿ, ರಾಜಗೋಪಾಲ ರೈ ಹಾಜರಿದ್ದರು.
ಸಚಿವರು ಎಚ್ಚರವಾಗಲಿ
ಮಂಗಳೂರು: ಗೋ ಕಳ್ಳಸಾಗಣೆಯಿಂದ ಜಿಲ್ಲೆಯಲ್ಲಿ ಜನತೆ ಭಯಭೀತಿಯಿಂದ ಜೀವಿಸುವಂತಾಗಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಪೊಲೀಸ್ ವ್ಯವಸ್ಥೆ ವಿರುದ್ಧ ನೀಡಿದ ಎಚ್ಚರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯನ್ನು ಬಿಜೆಪಿ ನಗರ ದಕ್ಷಿಣ ಕ್ಷೇತ್ರ ಅಧ್ಯಕ್ಷ ಶ್ರೀಕರ ಪ್ರಭು ಒತ್ತಾಯಿಸಿದ್ದಾರೆ.  ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂಥ ಪ್ರಕರಣ ಜಾಸ್ತಿಯಾಗುತ್ತಿದ್ದು, ತಡೆಯುವಲ್ಲಿ ಸಚಿವರು ಪೊಲೀಸ್ ಇಲಾಖೆಗ ನಿರ್ದೇಶನ ನೀಡಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement