ಗೋಸಾಗಾಟ ಅವ್ಯಾಹತ ಉಪ್ಪಿನಂಗಡಿ: ಜಾನುವಾರುಗಳ ಹಿಂಸಾತ್ಮಾಕ ಸಾಗಾಟ, ಮೂವರ ಸೆರೆ
ಉಪ್ಪಿನಂಗಡಿ: ಅಕ್ರಮ ಹಾಗೂ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಎಂಟು ಜಾನುವಾರು ಸಹಿತ ಮೂರು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ. ಗಸ್ತುನಿರತ ಉಪ್ಪಿನಂಗಡಿ ಠಾಣೆ ಎಸ್.ಐ. ರವಿ ಬಿ.ಎಸ್. ನೇತೃತ್ವದ ಪೊಲೀಸರ ತಂಡ 34ನೇ ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಜಾನುವಾರು ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಈ ಸಂದರ್ಭ, ಪ್ರಮುಖ ಆರೋಪಿ ಅಬ್ದುಲ್ ಖಾದರ್ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಏಳು ದನ ಹಾಗೂ ಒಂದು ಎಮ್ಮೆ ಕರುವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಹಳೇಬೀಡು ಸಮೀಪದ ಹೊಸೂರು ನಿವಾಸಿಗಳಾದ ರಹೀಂ, ಮಹಮ್ಮದ್ ರಫೀಕ್, ಜುಬಿವುಲ್ಲಾ ಎಂಬ ಮೂವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪ್ರಕರಣ ದಾಖಲಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಜಾನುವಾರು ಸಾಗಿಸುತ್ತಿದ್ದ ವಾಹನ ಪಲ್ಟಿ
ಕಾರ್ಕಳ: ಮುಂಡ್ಕೂರು ಗ್ರಾಮ ಜಾರಿಕಟ್ಟೆ ಜಾನುವಾರು ತುಂಬಿಸಿ ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿ ಜಖಂಗೊಂಡಿದ್ದು, ಅದರಲ್ಲಿದ್ದ ಒಂದು ದನ ಮತ್ತು ಕರುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಮಾಂಸಕ್ಕೆ ಸಾಗಿಸುತ್ತಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ದನ ಅಕ್ರಮ ಸಾಗಾಟ: ಇಬ್ಬರ ಸೆರೆ
ವಿಟ್ಲ: ಕೇರಳಕ್ಕೆ ಅಕ್ರಮವಾಗಿ ದನ ಸಾಗಾಟದ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸರು ವಾಹನ ಸಹಿತ ಎರಡು ದನ ಮತ್ತು ಇಬ್ಬರು ಅರೋಪಿಗಳನ್ನು ವಶಕ್ಕೆ ಪಡೆದ ಘಟನೆ ವಿಟ್ಲ ಕಸಬಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಿಟ್ಲದ ಕೊಡಂಗೆ ಮಸೀದಿ ಸಮೀಪದ ಅಬ್ಬೂಬಕ್ಕರ್ ಪುತ್ರ ಸಿರಾಜ್ ಯಾನೆ ಸಿರಾಜುದ್ದೀನ್ (21) ಜೊತೆಯಾಗಿ ಪಿಕಪ್ನಲ್ಲಿ ಕುಂಡಡ್ಕದ ದರ್ಬೆ ಮನೆಯ ಕೊರಗಪ್ಪ ಆಚಾರಿಯ ಪುತ್ರ ತಿಮ್ಮಯ್ಯ ಆಚಾರಿ (65) ತಮ್ಮ ಮನೆಯಲ್ಲಿ ಸಾಕುತ್ತಿದ್ದ ದನವನ್ನು ಸಾಗಿಸುತ್ತಿದ್ದ ಸಂದರ್ಭ ಮಾಹಿತಿ ಪಡೆದ ಪೊಲೀಸರು ಚಂದಳಿಕೆಯಿಂದ ವಾಹನವನ್ನು ಬೆನ್ನಟ್ಟಿ ಒಕ್ಕೆತ್ತೂರು ಸಮೀಪ ವಾಹನ ಅಡ್ಡಗಟ್ಟಿದ್ದಾರೆ. ಯಾವುದೇ ದಾಖಲೆಗಳಿಲ್ಲದ ಹಿನ್ನಲೆಯಲ್ಲಿ ವಶಕ್ಕೆ ಪಡೆದು ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿಟ್ಲ ಮುಖ್ಯ ರಸ್ತೆಯ ಮೂಲಕ ದನ ಸಾಗಾಟ ಮಾಡಿದರೆ ಎಲ್ಲರಿಗೆ ತಿಳಿದು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಒಕ್ಕೆತ್ತೂರು - ಮಂಗಳಪದವು ಕೋಡಪದವು - ಸಾಲೆತ್ತೂರು ಮಾರ್ಗವಾಗಿ ಕೇರಳಕ್ಕೆ ನಿರಂತರವಾಗಿ ದನ ಸಾಗಾಟ ಮಾಡಲಾಗುತ್ತಿದೆನ್ನಲಾಗಿದೆ. ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು, ಹೆಡ್ ಕಾನ್ಸ್ಟೇಬಲ್ ರಾಧಾಕೃಷ್ಣ, ಪ್ರವೀಣ್ ರೈ, ರಕ್ಷಿತ್ ರೈ, ಮುರುಗೇಶ್, ಲೋಕೇಶ್, ಭವಿತ್ ರೈ ಭಾಗವಹಿಸಿದ್ದಾರೆ.