ಮಕ್ಕಳಂತೆ ಸಾಕಿದ ದನ, ಕರು ದರೋಡೆ ಮಾಡಿ ಕೊಂದರು
ಮಂಗಳೂರು: 'ನನ್ನ ಮಕ್ಕಳಂತೆ ದನ, ಕರು ನೋಡಿಕೊಳ್ಳುತ್ತಿದ್ದೆ. ಇದರಿಂದಲೇ ನಾನು ಬದುಕು ಕಟ್ಟಿಕೊಂಡಿದ್ದೆ, ನನ್ನ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಿಸಿದೆ, ಪ್ರತಿ ವರ್ಷ ದನ ಹೆಚ್ಚು ಮಾಡಬೇಕು ಎಂದು ನನ್ನ ಆಸೆ ಆದರೆ, ದನಕಳ್ಳರು ಪ್ರತಿ ವರ್ಷವೂ ಬಂದು ಕದಿಯುತ್ತಾರೆ. ಈ ಬಾರಿ ಮಕ್ಕಳ ಮುಂದೆಯೇ ತಳವಾರ್ಗಳನ್ನು ಝಳಪಿಸಿ ಸಾಕಿದ ದನ, ಕರು ಕದ್ದು ಒಯ್ದಿದ್ದಾರೆ...' ಇದು ಸುರತ್ಕಲ್ನ ಕಾನದಲ್ಲಿ ದನಗಳನ್ನು ಕಳೆದುಕೊಂಡ ಮಹಾದೇವಮ್ಮ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಕಷ್ಟ ತೋಡಿಕೊಂಡ ರೀತಿ.
ಬಡತನ ಇದ್ದರೂ ಗೋವು ಇದ್ದ ಕಾರಣ ನಾವು ಜೀವನ ಸಾಗಿಸುತ್ತಿದ್ದೆವು. ಇದೀಗ ದನ, ಕರು ದರೋಡೆ ಮಾಡಿದ್ದಾರೆ. ಸೋರುವ ಮನೆ ಸರಿ ಮಾಡಲೇ ನಮ್ಮ ಬಳಿ ಹಣ ಇಲ್ಲ. ಈಗ ತುಂಬಾ ಕಷ್ಟವಾಗಿದೆ. ನಮಗೆ ಸರ್ಕಾರವೇ ಪರಿಹಾರ ನೀಡಬೇಕು ಎಂದು ಅಳಲು ತೋಡಿಕೊಂಡರು.
ಮುಚ್ಚೂರು ಪ್ರಗತಿ ಪರ ಕೃಷಿಕ, ಅತ್ಯಧಿಕ ಹಾಲು ಉತ್ಪಾದಕ ಎಂದು ಕೆಎಂಎಫ್ನಿಂದ ಪ್ರಶಸ್ತಿ ಪಡೆದಿರುವ ವಿದ್ಯಾಧರ ಹೆಗ್ಡೆ ಅವರ ಬಿಗು ಭದ್ರತೆಯ ಆಳೆತ್ತರದ ಕಂಪೌಂಡ್ ಇದ್ದರೂ ಮೂರು ದನಗಳು ಕಳವಾಗಿದೆ. 'ಮನೆಯಲ್ಲಿ 32 ದನಗಳಿವೆ. ಒಳ್ಳೆ ಜಾತಿಯ ಮೂರು ದನಗಳು 60 ಲೀಟರ್ ಪ್ರತಿದಿನ ಹಾಲು ನೀಡುತ್ತಿದ್ದವು. ಈ ದನಗಳಿಗೆ 50 ಸಾವಿರ ನೀಡಿದರೂ ಸಿಗುವುದಿಲ್ಲ' ಎನ್ನುತ್ತಾರೆ ಹೆಗ್ಡೆ.
ದನಗಳನ್ನು ಕಳೆದುಕೊಂಡಿರುವ ಜೆಪ್ಪಿನಮೊಗರು ಆ್ಯಂಟನಿ ಡಿಸೋಜ ಅವರಿಗೆ ಈಗ ಪ್ರತಿದಿನ ರಾತ್ರಿ ನಿದ್ದೆಯೇ ಇಲ್ಲ. ಮಧ್ಯ ರಾತ್ರಿ ಎದ್ದು ಕೊಟ್ಟಿಗೆಗೆ ಹೋಗಿ ನೋಡುತ್ತಾರೆ. ಆದರೆ 15 ದಿನಗಳ ಅವಧಿಯಲ್ಲಿ ಎರಡು ಬಾರಿ ಕೊಟ್ಟಿಗೆಗೆ ನುಗ್ಗಿ 3 ಗೋವುಗಳನ್ನು ಕಳವು ಮಾಡಿದ್ದಾರೆ. ರಾಮಪ್ಪ ಪೂಜಾರಿ (ರಾಂಪಣ್ಣೆ) ಅವರ ಮನೆಯಲ್ಲಿದ್ದ ಗೋವು ಕಳವಾಗಿದೆ, ದಷ್ಟಪುಷ್ಟವಾಗಿದ್ದ ಆ ಗೋವು 4 ಕ್ವಿಂಟಾಲ್ಗಿಂತಲೂ ಹೆಚ್ಚು ತೂಗುತ್ತಿತ್ತು. ಈ ಗೋವಿನ ಮೇಲೆ ಕಣ್ಣು ಬಿದ್ದ ಕಾರಣ ಕಳ್ಳರು ನಮ್ಮ ಮನೆ ಗೋವುಗಳನ್ನು ಕೂಡಾ ಕದ್ದು ಒಯ್ದಿದ್ದಾರೆ.
ಮನೆ ಗೃಹಪ್ರವೇಶಕ್ಕೆ ಗೋಶಾಲೆಯಿಂದ ಗೋವು ತಂದಿದ್ದೆ. ಬೆಳಗಾಗುವಷ್ಟರಲ್ಲಿ ಗೋವು ಕಳವಾಗಿತ್ತು ಎಂದು ಮುಡಿಪು ಶರತ್ ದುಃಖ ತೋಡಿಕೊಳ್ಳುತ್ತಾರೆ. ನಾವು ಸಾಕಿದ ದನವನ್ನು ಕದ್ದ ದುರುಳರು ಅದರ ಕಾಲು ಕಡಿದು ತುಳಸಿ ಕಟ್ಟೆಯಲ್ಲಿ ಎಸೆದು ಹೋಗಿದ್ದರು ಎಂದು ಉಳ್ಳಾಲ ಕೆ.ಸಿ.ರೋಡ್ನ ಮಯ್ಯ ದುಃಖಿಸುತ್ತಾರೆ.
ಅಲ್ಲಿ ಇನ್ನೂ ಅನೇಕ ಮಂದಿ ಇದ್ದರು. ಮನೆ ಪಕ್ಕದಲ್ಲಿ ಅಕ್ರಮ ಮೂರು ಕಸಾಯಿಖಾನೆಗಳಿದೆ, ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲಿ ಸಂಚರಿಸಲು ಕೂಡಾ ಹೆದರಿಕೆಯಾಗುತ್ತದೆ ಎಂಬುದು ಇನ್ನೊಬ್ಬರ ಸಂಕಟ. ಒಟ್ಟಾರೆ ಗೋವು ಕಳ್ಳತನ, ದರೋಡೆಯಿಂದ ಕಂಗೆಟ್ಟ ಅನೇಕ ಕುಟುಂಬಗಳು ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಷ್ಟ ತೋಡಿಕೊಂಡರು.