ಸುದ್ದಿ ಸಂಕ್ಷೇಪ
ಲೋಕಾಯುಕ್ತ ಬಲೆಗೆ ಗ್ರಾಮಸಹಾಯಕ
ಉಪ್ಪಿನಂಗಡಿ: ಜನನ ಪ್ರಮಾಣ ಪತ್ರ ನೀಡಲು 1500 ಲಂಚ ನೀಡಬೇಕೆಂದು ಸತಾಯಿಸುತ್ತಿದ್ದ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಗ್ರಾಮ ಸಹಾಯಕ ಸುಂದರಗೌಡ ಎಂಬಾತ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಉರುವಾಲು ಗ್ರಾಮದ ಕುಪ್ಪೆಟ್ಟಿ ಮನೆ ನಿವಾಸಿ ಸಿದ್ದಿಕ್ ಅಕ್ಬರ್ ತನ್ನ ಜನನ ಪ್ರಮಾಣಪತ್ರ ಪಡೆಯಲೆಂದು ಗ್ರಾಮ ಕರಣಿಕರ ಕಚೇರಿಗೆ ಹೋದಾಗ, ಅಲ್ಲಿದ್ದ ಗ್ರಾಮ ಸಹಾಯಕ, ಪ್ರಮಾಣಪತ್ರ ಇಲ್ಲಿ ನೀಡಲು ಅಸಾಧ್ಯ. ಒಂದು ವೇಳೆ ಜನನ ಪತ್ರ ಬೇಕಾದರೆ 1500 ನೀಡಬೇಕು ಎಂದು ತಿಳಿಸಿದ್ದ. ಗ್ರಾಮಕರಣಿಕರ ಗಮನಕ್ಕೆ ಬಾರದೇ ವ್ಯವಹಾರ ನಡೆಸಲು ಮುಂದಾದ ಗ್ರಾಮ ಸಹಾಯಕನ ಕೃತ್ಯವನ್ನು ಲೋಕಾಯುಕ್ತ ಪೊಲೀಸರ ಗಮನಕ್ಕೆ ತರಲಾಗಿತ್ತು. ಲೋಕಾಯುಕ್ತ ಪೊಲೀಸರು ಹೆಣೆದ ಬಲೆಗೆ ಸಿಲುಕಿದ ಗ್ರಾಮ ಸಹಾಯಕ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರ ಕೈ ವಶವಾಗಬೇಕಾಯಿತು. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಉಮೇಶ್ ಶೇಟ್, ದೀಲಿಪ್ ಕುಮಾರ್, ಸಿಬ್ಬಂದಿ ಬಾಲಚಂದ್ರ, ಹರಿಶ್ಚಂದ್ರ, ಸುಧಾಕರ, ಸಲೀಂ, ಭಾಸ್ಕರ, ಲೋಕೇಶ್, ನಾಗೇಶ್ ಪಾಲ್ಗೊಂಡಿದ್ದರು.
ಸಾಮೂಹಿಕ ಅತ್ಯಾಚಾರಕ್ಕೆ 10 ವರ್ಷ ಕಠಿಣ ಸಜೆ
ಮಂಡ್ಯ: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗಲು ಕಾರಣರಾದ ಮೂವರಿಗೆ ಒಂದನೇ ಅಪರ ಜಿಲ್ಲಾ ಸೆಷನ್ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಮಂಡ್ಯ ತಾಲೂಕು ವೈ. ಎರಹಳ್ಳಿ ಗ್ರಾಮದ 18 ವರ್ಷದ ಯುವತಿಯ ಮೇಲೆ 2012 ಏಪ್ರಿಲ್ 23ರ ಸಂಜೆ 7.30ರ ಸುಮಾರಿಗೆ ಅದೇ ಗ್ರಾಮದ ದೇವೇಗೌಡರ ಪುತ್ರ ಹನುಮೇಶ್, ನಿಂಗಯ್ಯನ ಪುತ್ರ ಸಂತೋಷ್ ಎಂಬುವವರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಿತಿನ್ ಎಂಬ ಯುವಕ ಈ ಕೃತ್ಯಕ್ಕೆ ಸಹಕರಿಸಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿದ್ದರು. ನಿತಿನ್ ಹೊರತುಪಡಿಸಿ ಉಳಿದವರಿಗೆ ಜಾಮೀನು ಸಹ ಸಿಕ್ಕಿರಲಿಲ್ಲ. ಅಂದಿನ ಡಿವೈಎಸ್ಪಿ ಚನ್ನಬಸವಣ್ಣ ಪ್ರಕರಣದ ಸಮಗ್ರ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಡಿಎನ್‌ಎ ಪರೀಕ್ಷೆಯಿಂದ ಅತ್ಯಾಚಾರ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ 10 ವರ್ಷ 7 ತಿಂಗಳು ಕಠಿಣ ಶಿಕ್ಷೆ, ತಲಾ 5 ಸಾವಿರ ದಂಡ ತಪ್ಪಿದರೆ, ಮತ್ತೆ 2 ವರ್ಷ ಕಠಿಣ ಶಿಕ್ಷೆ ನೀಡಿ ಆದೇಶಿಸಿದೆ.