ನಿತ್ಯ ನರಕದಲ್ಲೇ ಜೀವನ ನಡೆಸುತ್ತಿದೆ ಈ ಕುಟುಂಬ
ಸುಬ್ರಹ್ಮಣ್ಯ: ಈ ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಜೀವವೊಂದರ ಚೀರಾಟ, ಆಕ್ರಂದನ ಕಿವಿಗೆ ಅಪ್ಪಳಿಸುತ್ತದೆ. ಹುಟ್ಟಿನಿಂದಲೇ ಬುದ್ಧಿಮಾಂಧ್ಯನಾಗಿರುವ ಯುವಕನಿಗೆ ಪೋಲಿಯೊ ಸಹ ಬಂದು ನಿತ್ಯ ನರಕ ಅನುಭವಿಸುತ್ತಿದ್ದಾನೆ. ಈತನ ತಂದೆ ಮತ್ತು ತಮ್ಮ ಇಬ್ಬರೂ ಮಾನಸಿಕ ಅಸ್ವಸ್ಥರು. ಈ ಮೂವರನ್ನೂ ನೋಡಿಕೊಳ್ಳುತ್ತಿರುವ ತಾಯಿ ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಲೇ ಜೀವನ ಸಾಗಿಸಬೇಕಾಗಿದೆ. ಇಂಥದ್ದೊಂದು ಮನಕುಲುಕುವ ದೃಶ್ಯ ಸುಬ್ರಹ್ಮಣ್ಯ ಸಮೀಪದ ನಾಲ್ಕೂರು ಗ್ರಾಮದ ದಟ್ಟ ಕಾಡಿನ ಮಧ್ಯೆ ಇರುವ ಚಾರ್ಮತ (ಇಜಿನಡ್ಕ) ಎಂಬಲ್ಲಿ ಕಾಣಸಿಗುತ್ತದೆ. ಚಾರ್ಮತದ ನಿವಾಸಿ ಚಂದ್ರಕಾಂತ ಅವರಿಗೆ ಇಬ್ಬರು ಗಂಡು ಮಕ್ಕಳ ಪೈಕಿ 21 ವರ್ಷದ ಜಯಂತ ಬುದ್ಧಿಮಾಂದ್ಯ, ಪೋಲಿಯೊ ಪೀಡಿತ.
ತಂದೆ, ತಮ್ಮ ಮಾನಸಿಕ ಅಸ್ವಸ್ತರು: ಮನೆಗೆ ಆಸರೆಯಾಗಬೇಕಿದ್ದ ಯಜಮಾನ ಚಂದ್ರಕಾಂತ ಹಾಗೂ ಅವರ ಇನ್ನೊಬ್ಬ ಮಗ ತೀರ್ಥ ಇಬ್ಬರೂ ಮಾನಸಿಕ ಅಸ್ವಸ್ಥರು. ಹೀಗಾಗಿ ಮನೆಯ ಜವಬ್ದಾರಿಯೆಲ್ಲ ಯಜಮಾನಿ ದೇವಕಿ ಅವರ ಹೆಗಲ ಮೇಲೆ ಬಿದ್ದಿದೆ. ಜಯಂತನಿಗೆ 1000 ಮಾಸಾಶನ ಹೊರತು ಪಡಿಸಿ ಇತರ ಯಾವುದೇ ಸೌಲಭ್ಯವೂ ಇವರಿಗೆ ಲಭ್ಯವಾಗಿಲ್ಲ. ಸರ್ಕಾರ ಸೌಲಭ್ಯಗಳನ್ನು ಪಡೆಯಲು ಇವರ ಬಳಿ ಇರುವುದು ಎಪಿಎಲ್ ಕಾರ್ಡ್. ಹಾಗಾಗಿ 'ಅನ್ನಭಾಗ್ಯ'ವೂ ಈ ಕುಟುಂಬಕ್ಕಿಲ್ಲವಾಗಿದೆ. ಸಹಾಯ ಮಾಡಲು ಇಚ್ಚಿಸುವವರು ಅಂಚೆ ಕಚೇರಿ ನಡುಗಲ್ಲು, ಐ. ದೇವಕಿ, ಖಾತೆ ಸಂಖ್ಯೆ 1066807 ಅಥವಾ ವಿಳಾಸ: ದೇವಕಿ ಚಂದ್ರಕಾಂತ(ಇಜಿನಡ್ಕ) ಚಾರ್ಮತ, ನಾಲ್ಕೂರು ಗ್ರಾಮ, ನಡುಗಲ್ಲು ಅಂಚೆ, ಸುಳ್ಯ ತಾಲೂಕು, ದ.ಕ- 574218 ಗೆ ಸಂಪರ್ಕಿಸಬಹುದು.