ಅಪಘಾತ: ಯುವಕ ಸಾವು
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಬೆಳ್ಮ ನಿವಾಸಿ ಮಹಮ್ಮದ್ ಮನ್ಸೂರ್ ಸಖಾಫಿ(28) ಮೃತ ಯುವಕ. ಮಂಗಳೂರಿನಿಂದ ಬಿ.ಸಿ. ರೋಡು ಕಡೆಗೆ ತೆರಳುತ್ತಿದ್ದ ವೇಳೆ ಫರಂಗಿಪೇಟೆಯ ಮೀನು ಮಾರ್ಕೇಟ್ ಮುಂಭಾಗದಲ್ಲಿ ಈ ಅವಘಡ ಸಂಭವಿಸಿದೆ.
ಕೊಣಾಜೆ ಬೆಳ್ಮ ನಿವಾಸಿಯಾಗಿರುವ ಮನ್ಸೂರು ಪುತ್ತೂರು ಈಶ್ವರ ಮಂಗಿಲದ ಮಸೀದಿಯಲ್ಲಿ ಖತೀಬರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಬಂಟ್ವಾಳದ ನಂದಾವರದಲ್ಲಿರುವ ಅತ್ತೆ ಮನೆಯಲ್ಲಿದ್ದ ಪತ್ನಿಯನ್ನು ವಾಪಾಸ್ ಕರೆದುಕೊಂಡು ಹೋಗಲು ಬರುತ್ತಿದ್ದ ವೇಳೆ ದಾರಿ ಮಧ್ಯೆ ಈ ಘಟನೆ ನಡೆದಿದೆ. ಬೈಕ್ ಫರಂಗಿಪೇಟೆಗೆ ತಲುಪುತ್ತಿದ್ದಂತೆಯೇ ಮೀನು ಮಾರ್ಕೇಟ್ ಸಮೀಪ ಹೆದ್ದಾರಿಯಲ್ಲಿ ಹೋಗುತ್ತಿದ್ದ ಮರದ ದಿಮ್ಮಿ ಸಾಗಾಟದ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಮನ್ಸೂರ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮಹಮ್ಮದ್ ರಪೀಕ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಗಾಂಜಾ ಮಾರಾಟ: ಇಬ್ಬರ ಬಂಧನ
ಮಲ್ಪೆ: ಮಲ್ಪೆ ಬೀಚ್ನ ಪಾರ್ಕಿಂಗ್ ಬಳಿ ಪ್ರವಾಸಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದಸ್ತಿಗಿರಿ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಆರೋಪಿಗಳಾದ ಕೊಪ್ಪಳ ಜಿಲ್ಲೆಯ ದೇವಣ್ಣ ಹಾಗೂ ಶಂಕ್ರಪ್ಪ ಅವರು ಮಲ್ಪೆ ಬೀಚ್ನ ಪಾರ್ಕಿಂಗ್ ಬಳಿ ಪ್ರವಾಸಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡಸಿ ಆರೋಪಿಗಳಿಂದ 2 ಕೆ.ಜಿ. ಗಾಂಜಾ ಮತ್ತು ನಗದು ರು. 4,500 ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿನ ಪೆಜಮಂಗೂರು ಗ್ರಾಮದ ಗಾಂಧಿನಗರ ಹೊಸಮಠ ಎಂಬಲ್ಲಿ ಗುರುವಾರ ನಡೆದಿದೆ. ಐತಮರಕಾಲ ಮೃತರು. ಇವರ ಹೆಂಡತಿ ಸುಮಾರು 4 ತಿಂಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪೆಜಮಂಗೂರು ಗ್ರಾಮದ ಗಾಂಧಿನಗರ ಹೊಸಮಠ ಎಂಬಲ್ಲಿ ಹರಿಯಪ್ಪ ನಾಯ್ಕರ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸಾಕು ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಸಿದು ಬಿದ್ದು ವ್ಯಕ್ತಿ ಸಾವು
ಮಲ್ಪೆ: ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಕೊಡವೂರು ಗ್ರಾಮದ ಮಲ್ಪೆ ಸಭಾಭವನದ ಬಳಿ ಗುರುವಾರ ನಡೆದಿದೆ. ರಾಘವೇಂದ್ರ ಮಧ್ಯಸ್ಥ (32) ಮೃತರು. ಇವರು ನವೀನ್ ಅಮ್ಮನ್ನ ಎಂಬವರ ಬೇಕರಿಯಲ್ಲಿ ತಿಂಡಿ ಮಾಡುವ ಕೆಲಸ ಮಾಡಿಕೊಂಡಿದ್ದರು. ಗುರುವಾರ ಮಲ್ಪೆಯ ನವೀನ್ ಅಮ್ಮನ್ನ ಅವರ ಮನೆಗೆ ಕೊಡವೂರು ಗ್ರಾಮದ ಮಲ್ಪೆ ಸಭಾಭವನದ ಹಿಂಬದಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಇವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ರಾಘವೇಂದ್ರ ಮದ್ಯಸ್ಥ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನಿಗೆ ವಿಪರೀತ ಮದ್ಯ ಕುಡಿಯುವ ಚಟ ಇರುವುದಾಗಿದ್ದು, ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಚಂದ್ರಶೇಖರ ಮಧ್ಯಸ್ಥ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದನ ಕದ್ದು ಸಾಗಾಟ: ಮೂವರ ಬಂಧನ
ಸುಳ್ಯ: ಜಾನುವಾರುಗಳನ್ನು ಕಳವು ಮಾಡಿ ಕೇರಳದ ಕಸಾಯಿಖಾನೆಗಳಿಗೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದು, ಮೂವರನ್ನು ಬಂಧಿಸಿದ್ದಾರೆ.
ಗುರುವಾರ ಮುಂಜಾನೆ ಅರಂಬೂರಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಜೀಪಿನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಿಷಯ ತಿಳಿದು ಅದನ್ನು ವಶಕ್ಕೆ ಪಡೆದಿದ್ದಾರೆ.
ಎರಡು ಗಂಡು ಕರು ಹಾಗೂ ಒಂದು ಹೆಣ್ಣು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಲಾಗುತ್ತಿದ್ದು, ಜೀಪ್ ಹಾಗೂ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿಗಳಾದ ಸುಮೇಶ್ (27), ಜೋನ್ಸನ್ (44), ಮತ್ತು ಜೋರ್ಡ್ನ್ (32)ರನ್ನು ಬಂಧಿಸಲಾಗಿದೆ.
ಕಸಾಯಿಖಾನೆಗೆ ಸಾಗಿಸಲು ಇವರು ರಾತ್ರಿ ವೇಳೆ ಕೊಟ್ಟಿಗೆಯಿಂದ ಕರುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಔಷಧಿಗೆ ಹಣ ನೀಡಿಲ್ಲ ಎಂದು ರೈಲಿಗೆ ತಲೆಕೊಟ್ಟ
ಮಂಗಳೂರು: ಪತ್ನಿ ಔಷಧಿ ನೀಡಿಲ್ಲ ಎಂದು ಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ತೊಕ್ಕೊಟ್ಟಿನಲ್ಲಿ ಸಂಭವಿಸಿದೆ.
ಮಂಗಳೂರಿನ ಕಾರ್ಸ್ಟ್ರೀಟ್ನಲ್ಲಿ ಖಾಸಗಿ ಭದ್ರತಾ ಏಜೆನ್ಸಿಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ತಮಿಳ್ನಾಡು ಮೂಲದ ಮಣಿಕಂಠ(34)ಆತ್ಮಹತ್ಯೆ ಮಾಡಿಕೊಂಡಾತ.
ಸದಾ ಪಾನಮತ್ತನಾಗುತ್ತಿದ್ದ ಈತ ಪತ್ನಿ ಜತೆ ಹಣಕ್ಕಾಗಿ ಜಗಳ ಮಾಡುತ್ತಿದ್ದ. ಈತನ ಕುಡಿತದಿಂದ ರೋಸಿಹೋದ ಪತ್ನಿ ಹಣ ನೀಡಲು ನಿರಾಕರಿಸಿದ್ದಳು. ಔಷಧಿಗೆ ಹಣ ಬೇಕೆಂದು ಕೇಳಿದ್ದ. ಅದಕ್ಕೂ ಆಕೆ ನಿರಾಕರಿಸಿದಾಗ ಆಕೆಯ ತಮ್ಮನಿಗೆ ಫೋನಾಯಿಸಿ ತಾನು ಆತ್ಮಹತ್ಯೆ ಮಾಡುತ್ತಿರುವುದಾಗಿ ಹೇಳಿದ್ದ. ಬಳಿಕ ರಾತ್ರಿ ಮನೆಯಿಂದ ಹೊರಬಿದ್ದ ಮಣಿಕಂಠ ನೇರವಾಗಿ ರೈಲು ಮಾರ್ಗದಲ್ಲಿ ತೊಕ್ಕೊಟ್ಟಿಗೆ ಆಗಮಿಸಿದ್ದ. ಅಲ್ಲಿ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಬಂದು ಕಣ್ಣೂರಿಗೆ ಹೋಗುವ ರೈಲಿಗೆ ತಲೆಯೊಡ್ಡಿದ್ದಾನೆ. ರೈಲು ಹರಿದು ತಲೆ ಬೇರ್ಪಟ್ಟಿದೆ.
ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರಿಗೆ ಆತನ ಕಿಸೆಯಲ್ಲಿ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ತನ್ನ ಅಂಗಾಂಗವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವಂತೆ ಬರೆದಿದ್ದ. ಈತ ಮಂಗಳೂರಿನಲ್ಲಿ 40 ವರ್ಷದಿಂದ ವಾಸವಿದ್ದು, ಈತನ ಪತ್ನಿ ಈಗ 3 ತಿಂಗಳ ಗರ್ಭಿಣಿ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೀಲ್ ಮಾಡಿದ್ದ ಮರ ಕದಿಯಲು ವಿಫಲ ಯತ್ನ
ಮಂಗಳೂರು: ಸರ್ಕಾರಿ ಜಮೀನಿನಿಂದ ವಶಪಡಿಸಿ ಸೀಲ್ ಮಾಡಿದ್ದ 4 ಬೀಟೆ ಮರ ದಿಮ್ಮಿಯನ್ನು ಕದಿಯಲು ಯತ್ನಿಸಿ ನಾಲ್ವರು ಪೊಲೀಸರ ವಶವಾಗಿದ್ದಾರೆ.
ಮುಲ್ಲಕಾಡಿನಲ್ಲಿ ಮರ ದಿಮ್ಮಿ ಕದಿಯಲು ಹೊಂಚುಹಾಕುತ್ತಿದ್ದ ಸುಳಿವಿನ ಮೇರೆಗೆ ಗುರುವಾರ ದಾಳಿ ನಡೆಸಿದ ಕಾವೂರು ಪೊಲೀಸರು ಆರೋಪಿ ದಯಾಕರ, ವೀರಭದ್ರ, ಆನಂದ ಹಾಗೂ ವೀರೇಶ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಅರಣ್ಯ ಸಂಚಾರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಅರಣ್ಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೈಕಂಬ: ಕಾಡಾನೆ ದಾಳಿ
ಸುಬ್ರಹ್ಮಣ್ಯ: ಕೈಕಂಬ ಸಮೀಪದ ಭಾಗ್ಯ ಎಂಬಲ್ಲಿ ಗುರುವಾರ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿ ಅಪಾರ ಹಾನಿಯಾಗಿದೆ. ಭಾಗ್ಯದ ಲೋಕಯ್ಯ ಗೌಡರ ತೋಟದಲ್ಲಿ 50 ಅಡಕೆ ಮರ, 30 ಬಾಳೆ ಗಿಡ ಹಾಗೂ ನೀರಿನ ಪೈಪು ಹಾಳುಗೇಡವಿದೆ. ಹೊನ್ನಪ್ಪ ಗೌಡರ ತೋಟದಲ್ಲಿ ಸುಮಾರು 10 ತೆಂಗಿನ ಗಿಡ, ಬಾಳೆ, ಅಡಕೆ ಗಿಡಗಳಿಗೆ ಹಾನಿಯಾಗಿದೆ. ಲಕ್ಷ್ಮಣ ಗೌಡ ಹಾಗೂ ಪಕ್ಕದ ಇನ್ನಿತರ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಕೃಷಿ ಹಾನಿ ಮಾಡಿದೆ.