ಗೋ ಅಕ್ರಮ ಸಾಗಾಟ ಪ್ರಕರಣ ಹೆಚ್ಚಳ
ಸುಳ್ಯ: ದ.ಕ. ಜಿಲ್ಲೆಯ ಪೊಲೀಸರು ಗೋ ಮಾಫಿಯಾ ಜೊತೆ ಕೈಜೋಡಿಸಿದ್ದಾರೆ. ಅವರು ಅಧಿಕಾರಸ್ಥರ ಕೈಗೊಂಬೆಯಾಗಿದ್ದಾರೆ. ಹೀಗಾಗಿಯೇ ಇಲ್ಲಿ ಗೋ ಅಕ್ರಮ ಸಾಗಾಟ ಪ್ರಕರಣಗಳು ಹೆಚ್ಚುತ್ತಿವೆ ಎಂದು ಬಜರಂಗದಳ ಮುಖಂಡ ವಿನಯಕುಮಾರ್ ಕಂದಡ್ಕ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಡಿಕಾನದ ಅಡ್ಯಡ್ಕದಲ್ಲಿ ಇತ್ತೀಚೆಗೆ ದನಗಳ ಅಕ್ರಮ ಸಾಗಾಟ ತಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಸುಳ್ಳು ದೂರು ನೀಡುವಂತೆ ಪಿಕಪ್ ಚಾಲಕನ ಮೇಲೆ ಒತ್ತಡ ಹೇರಲಾಗಿತ್ತು ಎಂದು ದೂರಿದರು.
19ರಂದು ಪ್ರತಿಭಟನೆ: ಸುಳ್ಯದಲ್ಲಿ ಕಳೆದ ವರ್ಷ ನಡೆದ ಘಟನೆಗೆ ಸಂಬಂಧಿಸಿ ಪೊಲೀಸರ ಮೇಲೆ ಕೇಸು ದಾಖಲಾಗಿರುವುದರಿಂದ ಈಗ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಅಕ್ರಮ ಗೋ ಸಾಗಾಟ ಸೇರಿದಂತೆ ವಿವಿಧ ಹಿಂದೂ ವಿರೋಧಿ ದುಷ್ಕೃತ್ಯ ತಡೆಯಲು ಜನಜಾಗೃತಿಗಾಗಿ ಆ.19ರಂದು ತಾಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.
ಬಜರಂಗದಳ ಜಿಲ್ಲಾ ಸಹ ಸಂಚಾಲಕ ಮಹೇಶ್ ಕುಮಾರ್ ಮೇನಾಲ, ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ, ಮಂಡೆಕೋಲು ಗ್ರಾ.ಪಂ. ಅಧ್ಯಕ್ಷ ಸುರೇಶ್ ಕಣೆಮರಡ್ಕ, ಭಾನುಪ್ರಕಾಶ್, ಜಗದೀಶ್, ಬಾಲಕೃಷ್ಣ, ಹರೀಶ್, ಚಿದಾನಂದ ಇದ್ದರು.