'ಜೀವ ವಿಮಾ ನಿಗಮಕ್ಕೆ ವಿದೇಶಿ ಬಂಡವಾಳ ಹೂಡಿಕೆ ವಿರುದ್ಧ ಹೋರಾಟ ಅಗತ್ಯ'
ಮೂಲ್ಕಿ; ಜೀವ ವಿಮೆಯಲ್ಲಿ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಿಸುವ ಮೂಲಕ ದೇಶದ ಆರ್ಥಿಕ ಭದ್ರತೆಗೆ ನೆರವಾಗುತ್ತಿರುವ ಭಾರತೀಯ ಜೀವ ವಿಮಾ ನಿಗಮವನ್ನು ದುರ್ಬಲಗೊಳಿಸುವ ಕಾರ್ಯ ಕೇಂದ್ರ ಸರ್ಕಾರದಿಂದ ನಡೆಯುತ್ತಿದ್ದು, ಹೋರಾಟ ನಡೆಸುವ ಅಗತ್ಯವಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುರುದತ್ ಹೇಳಿದ್ದಾರೆ.
ಇಲ್ಲಿನ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಭಾರತೀಯ ಜೀವ ವಿಮಾ ನಿಗಮದ ವಿಮಾ ಪ್ರತಿನಿಧಿಗಳ ಸಂಘಟನೆಯ ಉಡುಪಿ ವಿಭಾಗೀಯ 4ನೇ ಸಮಾವೇಶದಲ್ಲಿ ಅವರು ಮಾತನಾಡಿದರು.
ಜೀವ ವಿಮಾ ನಿಗಮ ಉಡುಪಿ ವಿಭಾಗದ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಗಂಗಾಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಶಾಖೆಯ ಹಿರಿಯ ಪ್ರಬಂಧಕ ಇ.ಬಿ. ಲೋಬೊ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್, ಕೇಂದ್ರಿಯ ಸಮಿತಿ ಕಾರ್ಯದರ್ಶಿ ಎಲ್. ಮಂಜುನಾಥ್, ಮೂಲ್ಕಿ ಶಾಖೆಯ ಅಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಇದ್ದರು.