ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತುಳು 8ನೇ ಪರಿಚ್ಛೇದ ಸೇರಲಿ, ಬಳಿಕ ರಾಜ್ಯ ಪ್ರಸ್ತಾಪ

Vishwanath S
Updated On : 11 Aug 2013, 11:57 am

ಮಂಗಳೂರು: ತುಳು ಭಾಷಿಗರು ಅಧಿಕವಾಗಿರುವ ಕರಾವಳಿಯಲ್ಲಿ ತುಳು ರಾಜ್ಯ ಸ್ಥಾಪನೆ ಕುರಿತು ಚರ್ಚಿಸಲು ಕರೆಯಲಾದ ಸಭೆಯಲ್ಲಿ ತುಳು ರಾಜ್ಯ ಸ್ಥಾಪನೆ ವಿಚಾರದಲ್ಲಿ ವಿಭಿನ್ನ ನಿಲುವು ವ್ಯಕ್ತಗೊಂಡಿದೆ. ಬಹುತೇಕ ಮಂದಿ ಮೊದಲು ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲಿ, ನಂತರ ಪ್ರತ್ಯೇಕ ತುಳು ರಾಜ್ಯದ ವಿಚಾರ ಮಾತನಾಡೋಣ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಕದ್ರಿ ಮಲ್ಲಿಕಟ್ಟೆ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ತುಳು ರಾಜ್ಯ ಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ತಳೆಯಲು ವಿಫಲವಾಯಿತು. ಕೊನೆಗೆ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಎಂದು ಅಂಗೀಕರಿಸಬೇಕು, 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸೆ.7ರಂದು ನಗರದಲ್ಲಿ ಸಂಘಟಿಸಿದ ಹಕ್ಕೊತ್ತಾಯ ಮೆರವಣಿಗೆ ಯಶಸ್ವಿಗೊಳಿಸುವಂತೆ ಕೋರಲಾಯಿತು.
ಪ್ರತ್ಯೇಕ ರಾಜ್ಯ ಕಲ್ಪನೆ ಬದಿಗಿಡಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ತುಳು ಕಲಿಕಾ ಕೇಂದ್ರಕ್ಕೆ ಸರ್ಕಾರ ಎಷ್ಟು ಸಹಾಯ ಮಾಡಿದೆ ಎಂದು ಪ್ರಶ್ನಿಸಿದರು. ದ.ಕ. ಉಡುಪಿ, ಕಾಸರಗೋಡು ಜಿಲ್ಲೆ ತುಳುನಾಡು ಆಗಿದ್ದು, ನಮ್ಮ ವಂಶವೃಕ್ಷ ತುಳು ಆಗಿದೆ. ನಮ್ಮ ಪುರಾತನ ಮನೆಯಲ್ಲಿ ತುಳು ಲಿಪಿ ಇದ್ದಿದ್ದು, ಈಗ ತುಳು ಮಾತನಾಡುವವರು, ತುಳು ಲಿಪಿ ಮರೆಯಾಗಿದೆ. ಬೃಹತ್ ಯೋಜನೆಗಳು ತುಳುನಾಡಿನ ಸಂಸ್ಕೃತಿಯನ್ನು ನಾಶ ಮಾಡುತ್ತಿವೆ ಎಂದರು.
ಪ್ರತ್ಯೇಕ ತುಳು ರಾಜ್ಯ ಕಲ್ಪನೆಯನ್ನು ಬದಿಗೆ ಸರಿಸಿ ಎಂದ ಅವರು, ಇದರಿಂದ ಸರ್ಕಾರಿ ಅಧಿಕಾರಿಗಳಿಗೆ ಗೂಟದ ಕಾರು, ಜನರಿಗೆ ತೆರಿಗೆ ಹೊರೆಯಲ್ಲದೆ ಮತ್ತೇನಿಲ್ಲ. ನಮ್ಮ ಪ್ರಾದೇಶಿಕ ಭಾಷೆಯನ್ನ ಉಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಕೇಂದ್ರೀಯ ಸಮಿತಿ ರಚನೆಯಾಗಲಿ: ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ತುಳುನಾಡು ರಕ್ಷಣೆಗೆ ಕೇಂದ್ರೀಯ ಸಮಿತಿ ರಚನೆಯಾಗಲಿ. ಸೆ.7ರಂದು ನಡೆಯುವ ಹಕ್ಕೊತ್ತಾಯ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸುವಂತಾಗಬೇಕು. ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಬೇಕು ಎಂದರು.
ತುಳುವರು ಒಂದಾಗಿ: ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ತುಳುವಿಗೆ ರಾಜ್ಯದಲ್ಲಿ ಪ್ರಧಾನ್ಯತೆ ನೀಡಬೇಕು. ತುಳುವಿನಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಅವಕಾಶ ಸಿಗಬೇಕು. ದೊಡ್ಡ ಕೈಗಾರಿಕೆಗಳು ಕರಾವಳಿ ಪ್ರವೇಶಿಸುವುದನ್ನು ತಡೆಯಬೇಕು. ಇದರಿಂದ ತುಳುನಾಡಿನ ಇತಿಹಾಸಕ್ಕೆ ತೊಂದರೆಯಾಗುತ್ತದೆ. ತುಳುವರು ನಾಡ ರಕ್ಷಣೆಗೆ ಒಂದಾಗಬೇಕು ಎಂದು ಹೇಳಿದರು.
ಪರಂಪರೆಗೆ ಧಕ್ಕೆಯಾಗದಿರಲಿ: ಸಮಾಲೋಚನಾ ಸಭೆ ಉದ್ಘಾಟಿಸಿದ ಕಟೀಲು ಶ್ರೀದುರ್ಗಾಪರಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ತುಳು ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗಬಾರದು ಎಂದರು.
ಪ್ರತಿಭಟನೆಗೆ ಬರಬೇಕು: ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ್ ಕುಮಾರ್ ರೈ ಮಾತನಾಡಿ, ತುಳು ವಿಚಾರಕ್ಕೆ ಧಕ್ಕೆಯಾದಾಗ ಪ್ರತಿಭಟಿಸಲು ತುಳುವರು ಬರಬೇಕು ಎಂದು ರಾಣಿ ಅಬ್ಬಕ್ಕಳನ್ನು ಸ್ಪೀಕರ್ ಅವಹೇಳನ ವಿರುದ್ಧ ಜಿಲ್ಲೆಯಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರತಿರೋಧ ವ್ಯಕ್ತವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಾನು ಗ್ರಾಮ ಪಂಚಾಯ್ತಿನಿಂದ ಜಿಲ್ಲಾ ಪಂಚಾಯ್ತಿ ವರೆಗೆ ಸಭೆಯಲ್ಲಿ ತುಳುವಲ್ಲಿ ಮಾತನಾಡುತ್ತಿದ್ದು, ವಿಧಾನಸಭೆಯಲ್ಲೂ ತುಳು ಮಾತನಾಡಲು ಅವಕಾಶ ಸಿಗಬೇಕು ಎಂದು ಆಗ್ರಹಿಸಿದರು.
 ಚಲನಚಿತ್ರ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲಬೈಲ್, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ. ನಾಡಿದು ಹಕ್ಕೊತ್ತಾಯಕ್ಕೆ ಎಲ್ಲ ಕಲಾವಿದರು ಆಗಮಿಸಬೇಕು ಎಂದರು.
 ಮುಖಂಡರಾದ ಹೈದರ್ ಪಾರ್ತಿಪ್ಪಾಡಿ, ಭುವನಾಭಿರಾಮ ಉಡುಪ, ವಕೀಲ ದಿನೇಶ್ ಉಳಿಪಾಡಿ, ಕೆ.ಎನ್.ಟೇಲರ್, ಮದ್ದು ಮೂಡುಬೆಳ್ಳೆ, ಡಾ.ವೈ.ಎನ್.ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಸಂತೋಷ್ ರೈ, ಕಿರಣ್ ನಿಡ್ಡೋಡಿ ಮಾತನಾಡಿದರು.
ದೊಡ್ಡ ಕೈಗಾರಿಕೆಗಳು ಕರಾವಳಿ ಪ್ರವೇಶಿಸುವುದನ್ನು ತಡೆಯಬೇಕು. ಇದರಿಂದ ತುಳುನಾಡಿನ ಇತಿಹಾಸಕ್ಕೆ ತೊಂದರೆಯಾಗುತ್ತದೆ.
ಟಿ ಅಮರನಾಥ ಶೆಟ್ಟಿ, ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement