ನಾಳೆಯಿಂದ 'ಮಹಿಳೆಯರಿಗಾಗಿ' ವಿಶೇಷ ಬಸ್
ಮಂಗಳೂರು: ಮಹಿಳಾ ಮೀಸಲಾತಿ, ಮಹಿಳಾ ರಕ್ಷಣೆ ಕೂಗು ಕೇಳಿಬರುತ್ತಿರುವಂತೆಯೇ ಬೆಂಗಳೂರಿನಂತೆ ಮಂಗಳೂರಿನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಸಾರಿಗೆ ಓಡಾಟಕ್ಕೆ ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ನಿರ್ಧರಿಸಿದೆ.
ಆ.12ರಿಂದ ಮಂಗಳೂರು-ಕಾಸರಗೋಡು ಮಧ್ಯೆ ಪ್ರಾಯೋಗಿಕ ನೆಲೆಯಲ್ಲಿ ಬಸ್ ಓಡಾಟ ನಡೆಸಲಿದೆ. ಬೆಳಗ್ಗೆ 8 ರಿಂದ ಕಾಸರಗೋಡಿನಿಂದ ಹಾಗೂ ಮಂಗಳೂರಿನಿಂದ ಸಂಜೆ 6.05ಕ್ಕೆ ಸಂಚರಿಸಲಿದೆ. ಈ ಬಸ್ನಲ್ಲಿ ಚಾಲಕ, ನಿವಾರ್ಹಕರು ಸದ್ಯಕ್ಕೆ ಪುರುಷರು. ಹಾಲಿ ಸಂಚರಿಸುತ್ತಿರುವ ಬಸ್ಗಳಲ್ಲಿ ಒಂದನ್ನು ಮಹಿಳೆಯರಿಗಾಗಿ ಮೀಸಲಿಡಲಾಗುತ್ತದೆ. ಇದು ಯಶಸ್ವಿಯಾದರೆ ಇನ್ನಷ್ಟು ಮಹಿಳಾ ಬಸ್ಗಳು ಓಡಾಟ ನಡೆಸಲಿದೆ.
ಮಹಿಳಾ ಸಾರಿಗೆಗೆ ಪುರುಷ ಪ್ರಯಾಣಿಕರಿಗೆ ಪ್ರವೇಶವಿಲ್ಲ, ಮಹಿಳೆಯರಲ್ಲದೆ ಮಕ್ಕಳಿಗೆ ಸಂಚರಿಸಲು ಅವಕಾಶವಿದೆ. ಕಾಸರಗೋಡು-ಮಂಗಳೂರು ಮಧ್ಯೆ ಜನನಿಬಿಡ ಅವಧಿಯಲ್ಲಿ ಪ್ರತ್ಯೇಕ ಸಾರಿಗೆ ಒದಗಿಸುವಂತೆ ಮಹಿಳಾ ಸಂಘಟನೆಗಳು ಬೇಡಿಕೆ ಸಲ್ಲಿಸಿದ ಹಿನ್ನಲೆಯಲ್ಲಿ ಮಹಿಳಾ ಬಸ್ ರಸ್ತೆಗಿಳಿಸಲಾಗುತ್ತಿದೆ ಎಂದು ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.