ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಲಗೇಣಿ ಹಕ್ಕು-ಭೂ ಮಾಲೀಕರ ಕರೆದು ಶೀಘ್ರ ಸಮಸ್ಯೆ ಇತ್ಯರ್ಥ: ಸೊರಕೆ

Vishwanath S
Updated On : 11 Aug 2013, 12:00 pm

ಉಡುಪಿ: ಭೂಮಾಲೀಕರು ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಮೂಲಗೇಣಿ ಹಕ್ಕಿನ ಕಾನೂನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಭೂ ಮಾಲೀಕರನ್ನು ಕರೆದು ಸಮಸ್ಯೆಯನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲಾಗುವುದು ಮತ್ತು ಕಾನೂನನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಗೇಣಿದಾರರಿಗೆ ಆಶ್ವಾಸನೆ ನೀಡಿದ್ದಾರೆ.
ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲಗೇಣಿ ಸಮಸ್ಯೆ ಪರಿಹಾರವಾಗದಿರುವುದರಿಂದ ಅವಿಭಜಿತ ದ.ಕ. ಜಿಲ್ಲೆಯ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಗೆ ಬಹಳ ದೊಡ್ಡ ತಡೆಯಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಮಾಜಿ ಸಚಿವ ದಿವಂಗತ ಡಾ.ವಿ.ಎಸ್. ಆಚಾರ್ಯ ಅವರ ಪರಿಶ್ರಮ ಹಾಗೂ ಮುತುವರ್ಜಿಯಿಂದ ಮೂಲಗೇಣಿ ಹಕ್ಕಿನ ಸಂಬಂಧ ಕಾನೂನು ರಚಿಸಲಾಗಿದೆ. ಆದರೆ, ಈ ಕಾನೂನು ದಾರಿಗೆ ಬಂದಾಗ ಭೂಮಾಲೀಕರು ತಾವು ಕಳೆದುಕೊಳ್ಳುವ ಭೂಮಿಗೆ ಈಗಿನ ಮೌಲ್ಯ ಕೊಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಕಾನೂನು ಜಾರಿಗೊಳಿಸಲು ತೊಡಕುಂಟಾಗಿದೆ ಎಂದು ಸಚಿವರು ಸ್ಪಷ್ಟೀಕರಣ ನೀಡಿದರು. ಮೂಲಗೇಣಿ ವಿಚಾರದಲ್ಲಿ ಡಾ. ಆಚಾರ್ಯರ ನಿಲುವೇ ತನ್ನದು ಕೂಡ ಆಗಿದೆ. ಆದ್ದರಿಂದ ಮೂಲಗೇಣಿದಾರರು ಮತ್ತು ಭೂಮಾಲೀಕರನ್ನು ಕರೆದು ನ್ಯಾಯಾಲಯದ ಹೊರಗೆ ಒಂದು ಒಪ್ಪಂದಕ್ಕೆ ಬರುವಂತೆ ಮಾಡಿ ಈ ಕಾನೂನನ್ನು ಜಾರಿಗೊಳಿಸಲಾಗುವುದು ಎಂದರು. ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಅಧ್ಯಕ್ಷ ಮಾಕ್ಸಿಂ ಡಿಸಿಲ್ವ, ವೇದಿಕೆಯ ವಕೀಲ ಗೌರಿಶಂಕರ್ ಕೆ., ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್, ಕೆಪಿಸಿಸಿ ಸದಸ್ಯ ಎಂ.ಎ. ಗಫೂರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement