ರಾಷ್ಟ್ರೀಯ ಹಸಿರು ಕೋರ್ಟ್ನಿಂದ ಕೇಂದ್ರ ಅರಣ್ಯ ಇಲಾಖೆಗೆ ಎಚ್ಚರಿಕೆ
ಉಡುಪಿ: ಇಲ್ಲಿನ ನಂದಿಕೂರು ಗ್ರಾಮದ ಶ್ರೀ ಮಹಿಷಮರ್ಧಿನಿ ದೇವಾಲಯದ ಪವಿತ್ರ 'ದೇವರ ಕಾಡ'ನ್ನು ಕಾನೂನುಬಾಹಿರವಾಗಿ ನಾಶ ಮಾಡಿರುವ ಬಗ್ಗೆ ನಡೆಯುತ್ತಿರುವ ಮೊಕದ್ದಮೆಗೆ ಸಂಬಂಧಪಟ್ಟು ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ತಳೆದಿರುವ ನಿರಾಸಕ್ತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಲಯ (ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್) ದಕ್ಷಿಣ ಪೀಠ, ಮಂತ್ರಾಲಯದ ಮೇಲೆ ರು. 1 ಲಕ್ಷ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದೆ.
ರಾಷ್ಟ್ರೀಯ ಹಸಿರು ನ್ಯಾಯಾಲಯವು ನಡೆಸುತ್ತಿರುವ ವಿಚಾರಣೆಗೆ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ. ಜು. 5ರಂದು ನಡೆದ ವಿಚಾರಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಗೈರು ಹಾಜರಾಗಿತ್ತು. ಈ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿ, ಸ್ಪಷ್ಟೀಕರಣ ನೀಡಲು ಮುಂದಿನ ವಿಚಾರಣೆಯ ದಿನಾಂಕ (ಜು. 24)ದವರೆಗೆ ಕಾಲಾವಕಾಶ ನೀಡಿತ್ತು. ಆದರೆ, ಇದನ್ನೂ ಕೂಡ ಪರಿಸರ ಮತ್ತು ಅರಣ್ಯ ಮಂತ್ರಾಲಯ ನಿರ್ಲಕ್ಷ್ಯಿಸಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ಇನ್ನೊಂದು ಅವಕಾಶ ನೀಡಿದ್ದು, ಮುಂದಿನ ವಿಚಾರಣೆಯ ದಿನಾಂಕ (ಆ. 13)ದೊಳಗೆ ಸ್ಪಷ್ಟೀಕರಣ ನೀಡಲು ಆದೇಶಿಸಿದೆ. ತಪ್ಪಿದಲ್ಲಿ ರು. 1 ಲಕ್ಷ ದಂಡ ತೆರಬೇಕು ಮತ್ತು ಈ ದಂಡವನ್ನು ಅರಣ್ಯ ಸಂರಕ್ಷಣೆಗೆ ಬಳಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ ಎಂದು ಈ ಮೊಕದ್ದಮೆಯನ್ನು ಹೂಡಿರುವ ನಂದಿಕೂರು ಜನಜಾಗೃತಿ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಏನಿದು ದೇವರ ಕಾಡು ಪ್ರಕರಣ...?: ಕಳೆದ ಹತ್ತಾರು ವರ್ಷಗಳಿಂದ ಉಡುಪಿ ಜಿಲ್ಲೆಯ ನಂದಿಕೂರು ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಎಕ್ರೆ ಪ್ರದೇಶದ ಭೂಮಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗಾರಿಕೆಯ ಉದ್ದೇಶಕ್ಕಾಗಿ ನಾಶ ಮಾಡುತ್ತಿದೆ. ಅದರಲ್ಲೊಂದು ನಂದಿಕೂರು ದೇವಾಲಯಕ್ಕೆ ಸಂಬಂಧಿಸಿದ ಈ ದೇವರ ಕಾಡು, ನೂರಾರು ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿತ್ತು.
ಸುಝ್ಲಾನ್ ಕಂಪನಿಯ ವಿಶೇಷ ಆರ್ಥಿಕ ವಲಯದ ಸ್ಥಾಪನೆಗಾಗಿ ಸರ್ಕಾರ ಈ ಕಾಡನ್ನು ಸಂಪೂರ್ಣವಾಗಿ ಕಡಿದು ನೆಲಸಮ ಮಾಡಿದೆ. ಇದನ್ನು ಪ್ರಶ್ನಿಸಿ ಇಲ್ಲಿನ ನಂದಿಕೂರು ಜನಜಾಗೃತಿ ಸಮಿತಿ ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿತ್ತು.
ಗಾಳಿಯಿಂದ ವಿದ್ಯುತ್ ಯಂತ್ರಗಳನ್ನು ತಯಾರಿಸುವ ಸುಝ್ಲಾನ್ ಕಂಪನಿ ತನ್ನ ಕಾರ್ಖಾನೆಗೆ 150 ಎಕ್ರೆ ಭೂಮಿಯನ್ನು ಇಲ್ಲಿನ ಜನರಿಂದ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮೂಲಕ ಬಲವಂತವಾಗಿ) ಸ್ವಾಧೀನಪಡಿಸಿಕೊಂಡಿದೆ. ಅದರಲ್ಲಿ ಕಾಡು ಇರಲಿಲ್ಲ. ಆದರೆ, ಕಂಪನಿಯ ನಂತರ ಸುಮಾರು 1000 ಎಕ್ರೆ ಭೂಮಿಯನ್ನು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಪಡೆದುಕೊಂಡಿತು. ಇದರಲ್ಲಿ ದೇವರ ಕಾಡು ಸೇರಿದಂತೆ ನೂರಾರು ಎಕ್ರೆ ಕಾಡು ಕೂಡ ಇತ್ತು. ಈ ಕಾಡನ್ನು ನಾಶ ಮಾಡಿ ವಿಶೇಷ ಕೈಗಾರಿಕಾ ವಲಯ ಎಂಬ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಾ ಭಾರಿ ಬೆಲೆಗೆ ದೇಶಿಯ ಮತ್ತು ವಿದೇಶಿಯ ಕಂಪನಿಗಳಿಗೆ ಮಾರಿದೆ ಮತ್ತು ಜೈವಿಕ- ಪರಿಸರ ಹಾನಿ, ಜನಜೀವನದ ಮೇಲೆ ಪರಿಣಾಮ... ಮೊದಲಾದವುಗಳನ್ನು ನಿರ್ಲಕ್ಷ್ಯಿಸಿ, ಅದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಅಪೀಲಿನಲ್ಲಿ ಆರೋಪಿಸಲಾಗಿದೆ. ಈ ಅಪೀಲಿನ ವಿಚಾರಣೆ ಇದೀಗ ರಾಷ್ಟ್ರೀಯ ಹಸಿರು ನ್ಯಾಯಾಲಯದಲ್ಲಿ ನಡೆಯುತ್ತಿದೆ.