ಜೀವಂತ ನಾಗನಿಗೆ ಅಭಿಷೇಕ!
ಕಾಪು: ನಾಗರ ಪಂಚಮಿಯಂದು ಎಲ್ಲೆಡೆ ಜನರು ಕಲ್ಲಿನ ನಾಗನಿಗೆ ಹಾಲು ಸೀಯಾಳ ಎರೆದು ಕೃತಾರ್ಥರಾದರೆ, ಮಲ್ಲಾರು ಮಜೂರಿನ ಬ್ರಾಹ್ಮಣ ಕುಟುಂಬವೊಂದು ಜೀವಂತ ನಾಗನಿಗೆ ಹಾಲೆರೆಯುತ್ತಿದೆ. ಮಲ್ಲಾರು ಗ್ರಾಮದ ಮಜೂರಿನ ಗೋವರ್ದನ ಭಟ್ ಎಂಬವರು ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್. ಆದರೂ ಗಾಯಗೊಂಡ ನಾಗರ ಹಾವುಗಳನ್ನು ಮನೆಗೆ ತಂದು ಪೋಷಿಸಿ ಗುಣಮುಖವಾದ ನಂತರ ಕಾಡಿಗೆ ಬಿಡುವುದೇ ಇವರ ಕಾಯಕ. ಇಲ್ಲಿ ನಾಗರಹಾವು ಗಾಯಗೊಂಡು ಬಿದ್ದಿದ್ದರೂ ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸಿ ಅದನ್ನು ಮನೆಗೆ ತಂದು ಆರೈಕೆ ಮಾಡುತ್ತಾರೆ. ಪ್ರತಿ ವರ್ಷದಂತೆಯೇ ಈ ಬಾರಿಯೂ ಎರಡು ನಾಗರ ಹಾವುಗಳಿಗೆ ಹಾಲು, ಸೀಯಾಳ ಎರೆದು ತಮ್ಮ ಪಾಲಿನ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಇದುವರೆಗೆ ನೂರಾರು ಹಾವುಗಳಿಗೆ ಮರು ಜನ್ಮ ನೀಡಿದ ಕೃತಾರ್ಥತೆ ನನ್ನ ಕುಟುಂಬಕ್ಕಿದೆ. ಪ್ರತಿ ಬಾರಿ ನಾಗರ ಪಂಚಮಿ ಹತ್ತಿರ ಬರುತ್ತಿದ್ದಂತೆ ಗಾಯಗೊಂಡ ನಾಗರ ಹಾವುಗಳು ನಮಗೆ ಸಿಗುವುದು ಕಾಕತಾಳೀಯ. ಈ ಬಾರಿ 3 ನಾಗರ ಹಾವುಗಳು ಸಿಕ್ಕಿದ್ದು, ಒಂದು ಇಹಲೋಕ ತ್ಯಜಿಸಿದೆ. ಸಂಪೂರ್ಣ ಗುಣಮುಖವಾದ ಮರು ದಿನವೇ ಅದನ್ನು ಕಾಡಿಗೆ ಕಳುಹಿಸುತ್ತೇವೆ ಎನ್ನುತ್ತಾರೆ ಗೋವರ್ಧನ ಭಟ್.