ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಹಕಾರಿ ಸಂಘಗಳ ಉಳಿವಿಗೆ ಸಿಎಂ ಮಧ್ಯ ಪ್ರವೇಶಿಸಲಿ

Mainashree
Updated On : 12 Aug 2013, 10:54 am

ಮಂಗಳೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೃಷಿ ಸಾಲ ನೀಡುವಂತಿಲ್ಲ, ಠೇವಣಿ ಸಂಗ್ರಹಿಸುವಂತಿಲ್ಲ. ಕೇವಲ ಕಮಿಷನ್ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕೆಂದು ನಬಾರ್ಡ್ ಹೊರಡಿಸಿದ ಸುತ್ತೋಲೆಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಆದೇಶ ವಿರೋಧಿಸಿ ಆ.16ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಸಭೆ ಕರೆದಿದ್ದು, ಇದರ ವಿರುದ್ಧ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಘೋಷಿಸಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಧ್ಯಪ್ರವೇಶಿಸಿ ನಬಾರ್ಡ್ ಸುತ್ತೋಲೆ ಅನುಷ್ಠಾನ ತಡೆಹಿಡಿಯುವಂತೆ ಆಗ್ರಹಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್, ಜು.22ರಂದು ನಬಾರ್ಡ್ ಹೊರಡಿಸಿದ ಸುತ್ತೋಲೆ ಅನ್ವಯ ಗ್ರಾಮಾಂತರ ಪ್ರದೇಶದಲ್ಲಿ ಜನಸಾಮಾನ್ಯರ, ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿರುವ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಈ ಭಾಗದ ಜನರ ಆರ್ಥಿಕ ಶಕ್ತಿಯಾಗಿವೆ. ರೈತರಿಗೆ ಅಲ್ಪಾವಧಿ ಕೃಷಿ ಸಾಲ, ತನ್ನದೇ ಸಂಪನ್ಮೂಲದಿಂದ ವಿವಿಧ ಸಾಲ ಯೋಜನೆಗಳನ್ನು ರೂಪಿಸಿ ಪ್ರತಿ ಹಂತದಲ್ಲಿಯೂ ಜನತೆಗೆ ನೆರವಾಗುತ್ತಿವೆ. ಈಗ ನಬಾರ್ಡ್ ಸುತ್ತೋಲೆಯಿಂದ ಸಹಕಾರಿ ಕ್ಷೇತ್ರ ಬೆಚ್ಚಿಬಿದ್ದಿದೆ ಎಂದರು.
ತಾನೇ ಬದುಕಿಸಿ ಕತ್ತು ಹಿಸುಕೋದು: ರಾಜ್ಯದಲ್ಲಿ ಸುಮಾರು 4800ಕ್ಕೂ ಹೆಚ್ಚು ಪ್ರಾಥಮಿಕ ಪತ್ತಿನ ಸಂಘಗಳಿದ್ದು, ಸದಸ್ಯರಿಂದಲೇ ಚುನಾಯಿತ ಆಡಳಿತ ಮಂಡಳಿ ಇದೆ. ಇವನ್ನು ಸದೃಢಗೊಳಿಸಲು 2009ರಲ್ಲಿ ವೈದ್ಯನಾಥನ್ ವರದಿ ಜಾರಿಗೊಳಿಸುವಾಗ ಈ ಸಂಘಗಳ ಬಲವರ್ಧನೆಗೆ ಪ್ರೋತ್ಸಾಹಿಸಿತ್ತು. ಇದೀಗ ಸುತ್ತೋಲೆಯಿಂದ ಅದೇ ಸಂಘಗಳನ್ನು ಅವಸಾನದತ್ತ ದೂಡುತ್ತಿದೆ. ಹಳ್ಳಿಗಳಲ್ಲಿ ಈಗಿನಂತೆ ಸಹಕಾರ ಸಂಘಗಳು ಕಾರ್ಯನಿರ್ವಹಿಸಿದರೆ ಮಾತ್ರ ಸಹಕಾರ ಕ್ಷೇತ್ರದ ಮೂಲ ಆಶಯ ಈಡೇರಿದಂತಾಗುತ್ತದೆ ಎಂದರು. ನಬಾರ್ಡ್ ಸುತ್ತೋಲೆ ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದ ಎಲ್ಲ ಶಾಸಕರು, ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement