ಇಂದು ಆಟಿದ ಕೂಟ, ಅಭಿನಂದನಾ ಸಮಾರಂಭ
ಪುತ್ತೂರು: ತಾಲೂಕು ಬಂಟರ ಸಂಘ ಹಾಗೂ ಸಮೂಹ ಸಂಘಟನೆಗಳ ವತಿಯಿಂದ ಆಟಿದ ಕೂಟ, ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಆ. 14ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಭಾಗವಹಿಸಲಿದ್ದಾರೆ. ಡಾ. ಆಶಾಜ್ಯೋತಿ ಮಾಲಾಡಿ ಆಟಿದ ಆಚಾರ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಅಹಮದಾಬಾದ್ ಗುಜರಾತ್ ಬಂಟರ ಸಂಘದ ಅಧ್ಯಕ್ಷ ಎಚ್. ನಾರಾಯಣ ರೈ ಅವರನ್ನು ಅಭಿನಂದಿಸಲಾಗುವುದು ಹಾಗೂ ಪ್ರಗತಿ ಪರ ಕೃಷಿಕರಾದ ದೇರಣ್ಣ ರೈ ಪಾಪಿನಡ್ಕ ಮತ್ತು ಬಾಲಪ್ಪ ರೈ ಬಾಲ್ಯೋಟುಗುತ್ತು, ಜಯರಾಮ ರೈ ತೋಟದಡ್ಕ, ಯುವ ಉದ್ಯಮಿ ಸಂತೋಷ್ ಕುಮಾರ್ ರೈ ನಳಿಲು ಮತ್ತು ವೈದ್ಯೆ ಡಾ. ಸತ್ಯವತಿ ಆರ್ ಆಳ್ವ ಅವರನ್ನು ಗೌರವಿಸಲಾಗುವುದು ಎಂದರು. ಬೆಂಗಳೂರು ಬಂಟರ ಸಂಘದ ವತಿಯಿಂದ ಕೊಡಮಾಡುವ ವಿದ್ಯಾರ್ಥಿ ವೇತನವನ್ನು 35 ಮಂದಿ ಬಂಟ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದರು.