ನಿಡ್ಡೋಡಿ ಸ್ಥಾವರ ವಿರುದ್ಧ ಹೋರಾಟಕ್ಕೆ ಯೋಜನೆ
ಮೂಲ್ಕಿ: ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ಮುಂದಿನ ದಿನಗಳಲ್ಲಿ ಶಾಂತಿಗಾಗಿ ಕ್ರಾಂತಿ, ರೈತರ ಚಿತ್ತ ಜಿಲ್ಲಾಧಿಕಾರಿಯತ್ತ ಹಾಗೂ ಶಾಂತಿಯುತ ಕಾಲ್ನಡಿಗೆ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ನಿಡ್ಡೋಡಿಯ ಬಿಲ್ಲವ ಸಂಘದಲ್ಲಿ ಜರುಗಿದ ವಿದ್ಯುತ್ ಸ್ಥಾವರ ವಿರುದ್ಧದ ಹೋರಾಟ ಸಮಿತಿ, ಮಾತೃ ಸಂರಕ್ಷಣಾ ಸಮಿತಿ ಹಾಗೂ ನಿಡ್ಡೋಡಿ ಪರಿಸರದ ಮೆನ್ನಬೆಟ್ಟು, ಕೆಮ್ರಾಲ್, ಬಳ್ಕುಂಜೆ, ಪಾಲಡ್ಕ, ಪುತ್ತಿಗೆ, ಹೊಸಬೆಟ್ಟು, ಎಕ್ಕಾರು, ಕಲ್ಲಮುಂಡ್ಕೂರು, ತೆಂಕಮಿಜಾರು, ಬಡಗ ಎಕ್ಕಾರು ಮತ್ತು ಮುಚ್ಚೂರು ಗ್ರಾಪಂಗಳ ವ್ಯಾಪ್ತಿಯ ಹೋರಾಟದ ಉಪ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಯೋಜನೆ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ, ಸಹಾಯಕ ಕಮಿಷನರ್ಗೆ, ದ.ಕ. ಜಿಲ್ಲೆಯ ಶಾಸಕರಿಗೆ, ಸಚಿವಿಗೆ, ಸಂಸದರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು. ರಾಜಕೀಯ ರಹಿತವಾಗಿ ಹೋರಾಟ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಸಂಚಾಲಕ ಕಿರಣ್ ಮಂಜನಬೈಲು, ಕಾರ್ಯದರ್ಶಿ ವಿನೋಧರ ಸುವರ್ಣ, ಭಾಸ್ಕರ ದೇವಸ್ಯ, ಕೆ. ಭುವನಾಭಿರಾಮ ಉಡುಪ, ಜಿಪಂ ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷ ಜನಾರ್ದನ ಗೌಡ, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.