ಫರಂಗಿಪೇಟೆ ಕಟೌಟ್‌ನಲ್ಲಿ ಇನ್ನೂ ಶೆಟ್ಟರ್ ಸಿಎಂ !
ಬಂಟ್ವಾಳ: ರಾಜ್ಯ ಸರ್ಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿದಿದ್ದು, ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾಗಿ ಮೂರು ತಿಂಗಳುಗಳೇ ಕಳೆದರೂ ತಾಲೂಕಿನ ಫರಂಗಿಪೇಟೆಯ ಕಂದಾಯ ಇಲಾಖೆಯ ಕಟೌಟ್‌ವೊಂದರಲ್ಲಿ ಇನ್ನೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಹಾಗೂ ಈಶ್ವರಪ್ಪ ಉಪಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಯಾಗಿ ರಾರಾಜಿಸುತ್ತಿದ್ದಾರೆ.
ಫರಂಗಿಪೇಟೆ ಮೀನು ಮಾರುಕಟ್ಟೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಾಜ್ಯ ಸರ್ಕಾರದ ಯೋಜನೆಯಾದ ಅಟಲ್ ಜನಸ್ನೇಹಿ ಕೇಂದ್ರದ ಲೋಕಾರ್ಪಣೆ ಬಗ್ಗೆ ಕಂದಾಯ ಇಲಾಖೆಯ ವತಿಯಿಂದ ಬೃಹತ್ ಗಾತ್ರದ ಕಟೌಟ್‌ವೊಂದನ್ನು ಅಳಡಿಸಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಕಳೆದು ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ಬದಲಾಗಿ ತಿಂಗಳು ಕೆಲವು ಕಳೆದರೂ ಇನ್ನೂ ಇಲ್ಲಿನ ಇಲಾಖಾ ಕಟೌಟ್ ತೆರವುಗೊಳಿಸದೆ ಇರುವ ಇಲ್ಲಿನ ಸ್ಥಳೀಯಾಡಳಿತದ ಕ್ರಮದ ಬಗ್ಗೆ ಸ್ಥಳೀಯರು ಚರ್ಚೆ ನಡೆಸುತ್ತಿರುವುದು ಕೇಳಿ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ಕಟೌಟ್‌ನಲ್ಲಿ ಇನ್ನೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿಯೂ, ಈಶ್ವರಪ್ಪ ಉಪಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿಯಾಗಿಯೂ ರಾರಾಜಿಸುತ್ತಿರುವುದು ಕಂಡು ಬರುತ್ತಿದ್ದು, ಸಾರ್ವಜನಿಕ ಚರ್ಚೆಗೆ ವಸ್ತುವಾಗಿದೆ.