ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಕ್ಕಳಿಗೆ ಉಚಿತ ಕ್ಷೌರ

Mainashree
Updated On : 13 Aug 2013, 11:27 am

ಮಂಗಳೂರು: ಸ್ವಾತಂತ್ರ್ಯೋತ್ಸವಕ್ಕೆ ಇನ್ನೊಂದೇ ದಿನ ಬಾಕಿ. ಮಂಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಂಗಳವಾರ ಸಾಮೂಹಿಕ ಕ್ಷೌರ ಮಾಡಿಸಿಕೊಳ್ಳುವ ಮೂಲಕ ಸ್ವಾತಂತ್ರ್ಯೋತ್ಸವ ಸಡಗರಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.
ಬಿಕರ್ನಕಟ್ಟೆ ಪದವು ಶಾಲೆಯ ವಿದ್ಯಾರ್ಥಿಗಳೆಲ್ಲ ಸಾಮೂಹಿಕ ಕ್ಷೌರ ಮಾಡಿಸಿಕೊಂಡಿದ್ದಾರೆ. ಈ ವಿಶಿಷ್ಟ ಕಲ್ಪನೆ ಮೂಡಿದ್ದು ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ. ಇದನ್ನು ಕಾರ್ಯರೂಪಕ್ಕೆ ಇಳಿಸಿದ್ದು ಸ್ಥಳೀಯ 'ಕುಡ್ಲ ಮೆನ್ಸ್ ಸೆಲೂನ್‌'. ಮಂಗಳವಾರ ಹೆಚ್ಚಾಗಿ ಸೆಲೂನ್‌ಗಳಿಗೆ ರಜೆ. ಇದನ್ನೇ ಬಳಸಿಕೊಂಡ ಸೆಲೂನ್ ಮಂದಿ ಉಚಿತ ಕ್ಷೌರಕ್ಕೆ ಮುಂದಾಗಿದ್ದಾರೆ. 2 ವರ್ಷಗಳ ಹಿಂದೆ ತಮ್ಮ ಸೆಲೂನ್ ಉದ್ಘಾಟನೆ ವೇಳೆ ಸಮೀಪದ ಶಾಲೆ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡುವುದಾಗಿ ಮಾಲೀಕ ಸಂಜಯ್ ಮೆಹಾಲೆ ಹೇಳಿಕೊಂಡಿದ್ದರು. ಇದನ್ನು ಜಾರಿಗೊಳಿಸಲು ಸಮಯ ಬಂದಿರಲಿಲ್ಲ. ಹೇಗೂ ಸ್ವಾತಂತ್ರ್ಯೋತ್ಸವ ಬರುತ್ತಿದೆ. ಆಗಲೇ ಮಕ್ಕಳ ತಲೆಗೂದಲಿಗೆ ಕತ್ತರಿ ಹಾಕಿದರೆ ಹೇಗೆ ಎಂಬ ಆಲೋಚನೆ ಹೊಳೆದದ್ದೇ ತಡೆ, ಹಿರಿಯ ವಿದ್ಯಾರ್ಥಿ ಸಂಘ ಓಕೆ ಅಂದುಬಿಟ್ಟಿತು.
ಮಧ್ಯಾಹ್ನ 3 ಗಂಟೆ ಸಮಯ. ಶಾಲೆ ವೇದಿಕೆಯಲ್ಲಿ ಪುಟ್ಟ ಭಾಷಣ. 'ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಸ್ವಚ್ಛಂದ ಎಂದು ತಿಳಿದುಕೊಳ್ಳದೆ ತತ್ವಬದ್ಧರಾಗಿ ಕಾರ್ಯನಿರ್ವಹಿಸಬೇಕು. ಸುಂದರವಾಗಿ ಕೂದಲು ಕತ್ತರಿಸಿ ಶಾಲೆಗೆ ಬರಬೇಕು' ಎಂದು ಉದ್ಘಾಟಿಸಿದ ಅಲೋಶಿಯಸ್ ಸಂಧ್ಯಾ ಕಾಲೇಜು ಮಾಜಿ ಪ್ರಾಂಶುಪಾಲೆ ವೇದಾವತಿ ಹೇಳಿದರು. ನಾವು ಮುಂದಿನ ವರ್ಷವೂ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ವಿದ್ಯಾರ್ಥಿಗಳ ಸಾಮೂಹಿಕ ಉಚಿತ ಕ್ಷೌರ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹಳೆ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ರಮೇಶ್ ನುಡಿದರು. ಸಂಜೆ 3.30ರಿಂದ 5ರವರೆಗೆ ಸಂಜಯ್ ಮೆಹಾಲೆ ನೇತೃತ್ವದಲ್ಲಿ 7 ಮಂದಿ ಕ್ಷೌರಿಕರು ಕ್ಷೌರ ನೆರವೇರಿಸಿದರು. 6 ಮಂದಿ ಬಾಲಕಿಯರೂ ಸೇರಿದಂತೆ ಒಟ್ಟು 38 ವಿದ್ಯಾರ್ಥಿಗಳ ಕ್ಷೌರ ಮಾಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement