ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ
ಸುಳ್ಯ: ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರಾಗಿ ತಾ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಾ.ಪಂ. ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಆಯ್ಕೆಯಾಗಿದ್ದಾರೆ.
ಮಂಗಳವಾರ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆದ ಪಕ್ಷದ ಸ್ಥಾನೀಯ ಸಮಿತಿ, ಗ್ರಾಮ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಇವರ ಅವಿರೋಧ ಆಯ್ಕೆ ನಡೆಯಿತು.
ಪುತ್ತೂರಿನ ಬಿಜೆಪಿ ಮುಖಂಡ ಅಪ್ಪಯ್ಯ ಮಣಿಯಾಣಿ ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ ಮಠಂದೂರು, ಭಾಗೀರಥಿ ಮುರುಳ್ಯ, ಶಾಸಕ ಎಸ್. ಅಂಗಾರ, ಮಂಡಲ ಸಮಿತಿ ನಿರ್ಗಮನಾಧ್ಯಕ್ಷ ವೆಂಕಟ್‌ದಂಬೆಕೋಡಿ, ಬಿಜೆಪಿ ನಾಯಕರಾದ ಎ.ವಿ. ತೀರ್ಥರಾಮ, ಎನ್.ಎ. ರಾಮಚಂದ್ರ ಮೊದಲಾದವರಿದ್ದರು.
ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಯಾವುದೇ ಕಾಮಗಾರಿಗಳ ಸಂದರ್ಭದಲ್ಲಿ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿಂದೆ ಈ ನಿಟ್ಟಿನಲ್ಲಿ ಕೆಲವು ಪ್ರಮಾದಗಳು ನಡೆದಿದ್ದು, ಮುಂದೆ ಈ ರೀತಿ ನಡೆಯಬಾರದು ಎಂದು ಸಭೆಯಲ್ಲಿ ಮಾತನಾಡಿದ ಎನ್.ಎ. ರಾಮಚಂದ್ರ, ವೆಂಕಟ್ ದಂಬೆಕೋಡಿ ಮೊದಲಾದವರು ಹೇಳಿದರು.