ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನೆ ಮನೆ ಕಸ ಸಂಗ್ರಹ ಕಡ್ಡಾಯ: ಅನುಷ್ಠಾನ ಮಾತ್ರ ಶೂನ್ಯ

Vishwanath S
Updated On : 15 Aug 2013, 11:35 am

ಮಂಗಳೂರು: 2007ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಗೊಂಡ ಮನೆ ಮನೆ ಕಸ ಸಂಗ್ರಹಣೆ ವ್ಯವಸ್ಥೆಯ ಫಲಿತಾಂಶ ಇಂದಿಗೂ ಅನುತ್ತೀರ್ಣ.  
ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ವಾರ್ಡಿನ ಆರೋಗ್ಯ ಅಧಿಕಾರಿಗಳು ವಿಫಲಗೊಂಡಿದ್ದರೆ, ಪಾಲಿಕೆ ಅಧಿಕಾರಿಗಳು ಇವುಗಳ ಕಡೆ ಯಾವುದೇ ಗಮನ ಹರಿಸುತ್ತಿಲ್ಲ. ಸಿಬ್ಬಂದಿ ಕೊರತೆ ಒಂದೆಡೆಯಾದರೆ, ಕಸ ವಿಲೇವಾರಿಗೆ ಜನರ ಸಹಕಾರ ಸಿಗುತ್ತಿಲ್ಲ.
2 ವಾರ್ಡ್‌ಗೆ ಬಕೆಟ್ ವಿತರಣೆ: 60 ವಾರ್ಡ್‌ಗಳಲ್ಲಿ ಕೇವಲ ಮಣ್ಣಗುಡ್ಡೆ ಮತ್ತು ಕೋರ್ಟ್ ವಾರ್ಡಿನಲ್ಲಿ ಕಸ ಸಂಗ್ರಹಿಸುವ ಬಕೆಟ್ ವಿತರಿಸಲಾಗಿದೆ. ಈ ವಾರ್ಡ್‌ಗಳನ್ನು ಪ್ರಾಯೋಗಿಕವಾಗಿ ಆರಿಸಲಾಗಿದೆ. ಅಲ್ಲಿಯೂ ಎಲ್ಲ ಮನೆಗಳಿಗೆ ಬಕೆಟ್ ಕೊಡಲು ಪಾಲಿಕೆಗೆ ಸಾಧ್ಯವಾಗಿಲ್ಲ.
ನಗರ ವ್ಯಾಪ್ತಿಯಲ್ಲಿ ಮಾತ್ರ ಸಂಗ್ರಹಣೆ: ಮನೆ ಮನೆ ಕಸ ಸಂಗ್ರಹಣೆ ವಸತಿ ಸಮುಚ್ಛಯಗಳಲ್ಲಿ ಮತ್ತು ಅಲ್ಲಿನ ಸುತ್ತಮುತ್ತ ಪ್ರದೇಶಗಳ ಮನೆಗಳಿಂದ ಮಾತ್ರ ಆಗುತ್ತಿದೆ. ನಗರದೊಳಗಿನ ಕಾರ್‌ಸ್ಟ್ರೀಟ್, ಬಂದರು, ಡೊಂಗರಕೇರಿ, ಮಣ್ಣಗುಡ್ಡೆ, ವೆಲೆನ್ಸಿಯಾ, ಕಂಬಳ, ಕದ್ರಿ ಇಲ್ಲಿ ಕಸ ವಿಲೇವಾರಿ ನಡೆಯುತ್ತಿದೆ.
 ಭವಂತಿ ನಗರ, ಭೋಜರಾವ್ ಲೇನ್‌ನಲ್ಲಿ ಕಸ ವಿಲೇವಾರಿ ನಡೆಯುತ್ತಿಲ್ಲ. ಇಲ್ಲಿನ ಜನರು ಮಳೆಗಾಲದಲ್ಲಿ ಪ್ಲಾಸ್ಟಿಕ್ ಕಸವನ್ನು ಚರಂಡಿ ನೀರಿನಲ್ಲಿ ಬಿಡುತ್ತಿದ್ದಾರೆ. ಕಸ ಸಂಗ್ರಹಕ್ಕೆ ಯೋಜನೆಯ ನಿಯಮ ಪ್ರಕಾರ ಪಾಲಿಕೆ 120 ಜಾಗಗಳನ್ನು ಗುರುತಿಸಿದ್ದು, ಪ್ರತಿದಿನ ಮನೆ ಮನೆ ಕಸ ಸಂಗ್ರಹ ಆಗಬೇಕು. ಮನೆಯಿಂದ ಸಂಗ್ರಹಿಸಿದ ಕಸವನ್ನು ತಳ್ಳುಗಾಡಿ, ಚಿಕ್ಕ ಟೆಂಪೋಗಳಲ್ಲಿ 120 ಕಡೆಯಲ್ಲಿ ಹಾಕಿರುವ ಕಂಟೈನರ್‌ಗೆ ಹಾಕಬೇಕು. ಹೊಟೇಲ್, ಮದುವೆ, ಸಮಾರಂಭಗಳ ಸಭಾಂಗಣದಲ್ಲಿನ ತ್ಯಾಜ್ಯವನ್ನು ಲಾರಿ ಮೂಲಕ ತಂದು ಡಂಪಿಂಗ್ ಯಾರ್ಡ್‌ಗೆ ತಂದು ಸುರಿಯಬೇಕು.
ಬ್ಲೀಚಿಂಗ್ ಪೌಡರ್ ಹಾಕುತ್ತಿಲ್ಲ: ಕಂಟೈನರ್‌ಗಳ ಕಸವನ್ನು ತೆಗೆದ ನಂತರ ಅಲ್ಲಿ ಬ್ಲೀಚಿಂಗ್ ಪೌಡರ್ ಹಾಕಬೇಕು. ಆದರೆ ಕಸ ವಿಲೇವಾರಿ ಮಾಡಿದ ನಂತರ ಕಂಟೈನರ್‌ನಲ್ಲಿದ್ದ ನೀರು ರಸ್ತೆಗೆ ಹರಡುತ್ತದೆ. ಆದರೆ ಇದಕ್ಕೆ ಬ್ಲೀಚಿಂಗ್ ಹಾಕುವ ಪರಿಪಾಟ ಎಲ್ಲಿಯೂ ಕಂಡು ಬರುತ್ತಿಲ್ಲ.
 ಮನೆ ಮನೆ ಕಸ ಸಂಗ್ರಹಣೆ ಮತ್ತು ಸ್ವಚ್ಛತೆ ಕುರಿತು ಆಯಾ ವಾರ್ಡಿನ ಆರೋಗ್ಯ ನಿರೀಕ್ಷಕರು ಪರಿಶೀಲನೆ ನಡೆಸಿ ವರದಿಯನ್ನು ಪಾಲಿಕೆ ಆರೋಗ್ಯಧಿಕಾರಿಗೆ ತಿಳಿಸಬೇಕಾಗುತ್ತದೆ.
 ಪಿವಿಎಸ್ ಬಳಿಯ ಕೈಬರ್ ರಸ್ತೆಯಲ್ಲಿ ಇರುವ ಕಂಟೈನರ್‌ಗೆ ಸಂಜೆ ವೇಳೆ ಮೂಟೆ, ಮೂಟೆ ಕಸವನ್ನು ತಂದು ಹಾಕುತ್ತಾರೆ. ನಗರದ ಬಹುತೇಕ ಕಡೆಯಲ್ಲಿ ಮಧ್ಯಾಹ್ನದವರೆಗೂ ಕಸ ಎತ್ತುವ ಕೆಲಸ ನಡೆಯುತ್ತಾ ಇರುತ್ತದೆ. ಮಳೆಗೆ ಕಂಟೈನರ್‌ನಲ್ಲಿನ ಕೊಳಚೆ ನೀರು ರಸ್ತೆ ಇಡೀ ಹರಿದಿರುತ್ತದೆ. ಇದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ.
12 ವರ್ಷದ ಹಿಂದಿನ ಯೋಜನೆ: ಈ ಯೋಜನೆಯನ್ನು 12 ವರ್ಷಗಳ ಹಿಂದೆ  ಪಾಲಿಕೆ ಮಾಜಿ ಸದಸ್ಯ ವೆಂಕಟೇಶ ಆಚಾರ್ಯ ಅವರು ತಮ್ಮ ವಾರ್ಡ್ ಮಣ್ಣಗುಡ್ಡೆಯಲ್ಲಿ ಮನೆಯಿಂದ ಕಸ ಸಂಗ್ರಹಣೆ ಮಾಡುವ ಕೆಲಸವನ್ನು ಆರಂಭಿಸಿದರು. ಇದಕ್ಕಾಗಿ ನಾಲ್ಕು ಮಂದಿ ನೇಮಿಸಿ, ಅವರಿಗೆ ಸೈಕಲ್ ನೀಡಲಾಗಿತ್ತು. ಆಗ ಜನರ ಸ್ಪಂದನೆ ಉತ್ತಮವಾಗಿತ್ತು. ಕ್ರಮೇಣ ವಾರ್ಡಿನ ವ್ಯಾಪ್ತಿ ಹೆಚ್ಚಾದ ಪರಿಣಾಮ ಪಾಲಿಕೆ ಜವಾಬ್ದಾರಿಯನ್ನು ವಹಿಸಿಕೊಂಡಿತು.
ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಕಸ ವಿಲೇವಾರಿ ಜವಾಬ್ದಾರಿ ಪ್ರತಿಯೊಬ್ಬ ಮನೆ ಮಂದಿಯದ್ದಾಗಿರುತ್ತದೆ. ನಗರ ನೈರ್ಮಲೀಕರಣ, ಕಸ ಸಂಗ್ರಹಣೆ ಜವಾಬ್ದಾರಿ ಪಾಲಿಕೆಯದ್ದಾಗಿರುತ್ತದೆ.
 ಮಂಗಳೂರು ಪಾಲಿಕೆಯ 60 ವಾರ್ಡಿಗಳಿಗೆ ಕೇವಲ 7 ಮಂದಿ ಆರೋಗ್ಯ ನಿರೀಕ್ಷಕರಿದ್ದಾರೆ. ಸಿಬ್ಬಂದಿಗಳ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ.
ಖಾಸಗಿ ಕಂಪನಿಗೆ ಗುತ್ತಿಗೆ: ಮನೆ ಮನೆ ಕಸ ಸಂಗ್ರಹ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರಕಿದ್ದು, ಮುಂಬೈನ ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ವಹಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ವಾರ್ಷಿಕ ರು. 7 ಲಕ್ಷ ಗುತ್ತಿಗೆ ನೀಡಲಾಗಿದೆ.
ಎರಡು ವಲಯ: ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳೂರು ಉತ್ತರ ಮತ್ತು ದಕ್ಷಿಣ ವಲಯ ಎಂಬುದಾಗಿ ಎರಡು ವಿಭಾಗ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತದೆ. ಪ್ರದೇಶ, ವಾಹನದ ವ್ಯವಸ್ಥೆಯನ್ನು ಗುತ್ತಿಗೆದಾರರೇ ನಿರ್ವಹಿಸಬೇಕಾಗುತ್ತದೆ. ಎಲ್ಲದಕ್ಕೂ ಜನರ ಸಹಕಾರ ಮುಖ್ಯ ಎನ್ನುತ್ತಾರೆ ಪಾಲಿಕೆಯ ಪರಿಸರ ಎಂಜಿನಿಯರ್ ಮಂಜುನಾಥ್ ಶೆಟ್ಟಿ.

- ವಜ್ರಾಕ್ಷಿ ಬಂಟ್ವಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement