ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ ಸ್ಥಾಪನೆ

Lingaraj Badiger
Updated On : 16 Aug 2013, 12:03 pm

ಮಂಗಳೂರು: ಮಂಗಳೂರಿನಲ್ಲಿ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಗುರುವಾರ ನೆಹರೂ ಮೈದಾನದಲ್ಲಿ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯೋಜನೆಯಲ್ಲಿ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪೊಲೀಸ್ ಸಾರ್ವಜನಿಕ ಶಾಲೆ ಮಾದರಿಯಂತೆ ಇನ್ನೊಂದು ಶಾಲೆ ಪ್ರಾರಂಭಿಸಲಾಗುವುದು ಎಂದರು.
ಮಂಗಳೂರು ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದಲ್ಲಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ಪೀಠ ಸ್ಥಾಪಿಸಲಾಗುವುದು. ಇದಕ್ಕಾಗಿ ರು. 2 ಕೋಟಿ ಅನುದಾನ ಮೀಸಲಿರಿಸಲಾಗಿದೆ.
ಜೈನ ಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಸ್ಥಾಪಿಸಲು ಉದ್ದೇಶಿಸಿದ್ದು, ಶೀಘ್ರದಲ್ಲಿ ನಿರ್ಮಿಸಲಾಗುವುದು. ಅಲ್ಲದೆ ಕವಿಯ ಜಯಂತಿ ಆಚರಣೆಗೆ ಆರ್ಥಿಕ ನೆರವನ್ನು ಘೋಷಿಸಲಾಗಿದೆ ಎಂದರು.
ತುಳು ಮತ್ತು ಬಿಲ್ಲವ ಸಮಾಜದ ಆರಾಧ್ಯ ದೈವವಾದ ಕೋಟಿ-ಚೆನ್ನಯರ ಪುತ್ತೂರಿನ ಜನ್ಮ ಸ್ಥಳ ಪಡುಮಲೆಯಲ್ಲಿ ಅವರು ಹುಟ್ಟಿ-ಬೆಳೆದ ಕುರುಹುಗಳ ಅಭಿವೃದ್ಧಿಗೆ ರು. 5 ಕೋಟಿ ನೀಡಲಾಗಿದೆ.
ಸಾರಿಗೆ ಸೇವೆಯನ್ನು ಉನ್ನತೀಕರಣಗೊಳಿಸಲು ಜಿಲ್ಲೆಯ ಸುರತ್ಕಲ್‌ನಲ್ಲಿ ಪ್ರಾದೇಶಿಕ ಕಚೇರಿ ತೆರೆಯಲಾಗುವುದು. ಮಂಗಳೂರು-ಗುಲ್ಬರ್ಗಾಗಳಲ್ಲಿ ರು. 30 ಕೋಟಿ ವೆಚ್ಚದಲ್ಲಿ ವಾಹನ ಚಾಲಕ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿದೆ. ಡ್ರೈವಿಂಗ್ ಲೈಸನ್ಸ್ ನೀಡುವ ವೇಳೆ ಮಂಗಳೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷೆ ಟ್ರ್ಯಾಕ್‌ಗಳನ್ನು ಸ್ಥಾಪಿಸಿಲಾಗುವುದು ಎಂದರು.
ಅನ್ನ ಭಾಗ್ಯ ಯೋಜನೆಯಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಪೂರೈಸಲು ಕ್ರಮವಹಿಸಿ ಗೋದಾಮುಗಳಲ್ಲಿ ಅಕ್ಕಿ ಸಂಗ್ರಹಣೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ದ.ಕ. ಜಿಲ್ಲೆಯಲ್ಲಿ 511 ನ್ಯಾಯಬೆಲೆ ಅಂಗಡಿಗಳಿದ್ದು, ಪ್ರಸ್ತುತ 21,079 ಅಂತ್ಯೋದಯ, 1,79,293 ಬಿಪಿಎಲ್ ಕುಟುಂಬಗಳು ಪ್ರಯೋಜನ ಪಡೆಯುತ್ತಿದ್ದಾರೆ.

ಪುಟ್ಟ ಹೆಲಿಕಾಪ್ಟರ್
ಮೂಡುಬಿದಿರೆ ರತ್ನಾಕರ ಅವರು ನಿರ್ಮಿಸಿದ ಕ್ಯಾಮರಾ ಹೊತ್ತ ಪುಟ್ಟ ಹೆಲಿಕಾಫ್ಟರ್ ಜನರನ್ನು ಆಕರ್ಷಿಸಿತು. ಸುಮಾರು 100 ಅಡಿ ಎತ್ತರಕ್ಕೆ ಹಾರಿದ ಹೆಲಿಕಾಫ್ಟರ್‌ನಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು, ಮೇಲಿನಿಂದ ಇದು ಜನರನ್ನು ಚಿತ್ರೀಕರಿಸಿತು. ಅಲ್ಲದೆ ಇನ್ನೊಂದು ಹೆಲಿಕಾಫ್ಟರ್ ಮೂಲಕ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.

ವೆಬ್‌ಸೈಟ್ ಅನಾವರಣ
ಕೊರಗ ಜನಾಂಗದವರ ಸಮಗ್ರ ಮಾಹಿತಿ, ಸಂಸ್ಕೃತಿ ಕುರಿತಾದ ಸಮೀಕ್ಷೆ ವಿವರದ ವೆಬ್‌ಸೈಟ್‌ನ್ನು ಸಚಿವರು ಅನಾವರಣಗೊಳಿಸಿದರು. ಇದರಲ್ಲಿ 4,858 ಜನಸಂಖ್ಯೆ ಹಾಗೂ 1,206 ಕುಟುಂಬಗಳ ಮಾಹಿತಿ ಲಭ್ಯವಿದೆ. ಇದೇ ಸಂದರ್ಭ ಮಳವೂರು ಗ್ರಾಮದ ಪೂವಮ್ಮ, ಶೋಭಾಗೆ ಸ್ಮಾರ್ಟ್ ಕಾರ್ಡ್‌ನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement