ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಬೇಕಿದೆ: ಐ.ಎನ್. ರೈ
ಮಂಗಳೂರು: 'ಸೇನೆಯಲ್ಲಿ ಒಬ್ಬನೇ ಒಬ್ಬ ಮಂಗಳೂರಿನ ಯುವ ಅಧಿಕಾರಿ ನನ್ನ 35 ವರ್ಷದ ಸೇವಾ ಅವಧಿಯಲ್ಲಿ ಸಿಗದೇ ಇರುವುದು ಬೇಸರ ಮೂಡಿಸಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಿ ದೇಶ ಸೇವೆ ಸಲ್ಲಿಸಬೇಕಾದ ಅಗತ್ಯವಿದೆ' ಎಂದು ಬ್ರಿಗೇಡಿಯರ್ ಐ.ಎನ್. ರೈ ಹೇಳಿದರು.
ಪುರಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ತಿಳಿಸಿಕೊಡುವ ದೊಡ್ಡ ಜವಾಬ್ದಾರಿ ಶಿಕ್ಷಕರು ಮತ್ತು ಹೆತ್ತವರ ಮುಂದಿದೆ. ಜಾತಿ ಧರ್ಮ ಮೀರಿ ನಾವೆಲ್ಲಾ ಭಾರತೀಯರು ಎಂಬ ದೇಶ ಪ್ರೇಮವನ್ನು ಮಕ್ಕಳ ಸುಪ್ತ ಮನಸ್ಸಿನಲ್ಲಿ ಮೂಡಿಸುವ ಕೆಲಸ ಮಾಡಬೇಕು. ಆದರೆ ಇಂದು ಜಾತಿ ಧರ್ಮಗಳ ಹೆಸರಿನಲ್ಲಿ ಒಡಕು ಮೂಡಿಸಲಾಗುತ್ತಿದೆ. ಯುವ ಜನರಲ್ಲಿ ಜಾತ್ಯತೀತ ಮನೋಭಾವ ಕ್ಷೀಣಿಸುತ್ತಿದೆ ಎಂದರು.
ದೇಶಕ್ಕಾಗಿ ವಿರೋಧಿಗಳೊಂದಿಗೆ ಹೋರಾಡುವಾಗ 11 ಬಾರಿ ಸತ್ತು ಬದುಕಿದ್ದೇನೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸಿ ಭಾರತ ರಕ್ಷಣೆ ಕಾರ್ಯದಲ್ಲಿ ಭಾಗಿಯಾದ ಹೆಮ್ಮೆ ಮತ್ತು ತೃಪ್ತಿಯಿದೆ ಎಂದರು.
ಶಾಸಕ ಜೆ.ಆರ್. ಲೋಬೋ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಬಿಇಒ ಲೋಕೇಶ್, ಡಿಡಿಪಿಐ ಮೋಸೆಸ್ ಜಯಶೇಖರ್, ಕೆನರಾ ಹೆಣ್ಮಕ್ಕಳ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಲೀಲಾವತಿ, ಮಂಗಳೂರು ತಾಲೂಕು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮಿಶೆಟ್ಟಿ, ಜಯಶ್ರೀ ಇದ್ದರು.