ವಿದ್ಯುತ್ ಸ್ಪರ್ಶ: ಕಾರ್ಮಿಕನಿಗೆ ಗಾಯ
ಬೆಳ್ತಂಗಡಿ: ಗುರುವಾಯನಕರೆ ಇಲ್ಲಿಯ ಮಾಕೆರೆಕೆರೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಸೆಂಟ್ರಿಂಗ್ ಮಾಡುತ್ತಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಷಕ್ಕೆ ಒಳಗಾಗಿ ಸುಟ್ಟ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ತಾಲೂಕು ಕಾವಲಕಟ್ಟೆ ನಿವಾಸಿ ಮಾಯಿಲಪ್ಪ ಎಂಬವರ ಪುತ್ರ ಶಿವರಾಜ್(21) ಎಂಬವರೇ ಗಾಯಗೊಂಡವರು. ಇವರು ಗುರುವಾಯನಕರೆ ಅಗ್ನಿಶಾಮಕ ದಳದ ಕಟ್ಟಡದ ಸನಿಹ ಮನೆಯೊಂದು ನಿರ್ಮಾಣ ಹಂತದಲ್ಲಿರುವ ವೇಳೆ ಸೆಂಟ್ರಿಂಗ್ ಕಾರ್ಯ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಪಕ್ಕದಲ್ಲಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದರು. ಶರೀರ ಪೂರ್ತಿ ಸುಟ್ಟುಹೋಗಿದ್ದು ಕೂಡಲೇ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾಗ ತಕರಾರು: ದಂಪತಿ ಮೇಲೆ ಹಲ್ಲೆ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಮಸ್ಕಟ್ಟೆಯ ನಿವಾಸಿ ವಲೇರಿಯನ್ ಪಾಯಸ್ರವರು ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಸೇರಿಕೊಂಡು ನೆರೆಕರೆಯ ಕಾಮೆಲ್ ಮತ್ತು ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇವರ ನಡುವೆ ಜಾಗದ ತಕರಾರಿದ್ದು ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದು ಕಾಮೆಲ್ನ ಪುತ್ರ ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮಹಿಳೆ ಸರ ಸೆಳೆದು ಪರಾರಿ
ಕಾರ್ಕಳ: ಸಾಣೂರು ಗ್ರಾಮದ ಚಿಲಿಂಬಿ ಎಂಬಲ್ಲಿ ಮಹಿಳೆಯೊಬ್ಬರ ಸರ ಸೆಳೆದು ಪರಾರಿಯಾದ ಘಟನೆ ಬುಧವಾರ ನಡೆದಿದೆ. ಸಾಣೂರು ಗ್ರಾಮದ ನಿವಾಸಿ ಗ್ರೇಡಿ ಡಿಸೋಜ ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೆಳುವಾಯಿಂದ ಕಾರ್ಕಳದತ್ತ ಬೈಕ್ನಲ್ಲಿ ಬಂದ ಅಪರಿಚಿತರು 9 ಪವನ್ನ ಕುತ್ತಿಗೆ ಸರ ಎಗರಿಸಿ ಪರಾರಿಯಾಗಿದ್ದಾಗಿ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.