ಕೊಲ್ಲಮೊಗ್ರದಲ್ಲಿ ಕಡವೆ ಮೃತದೇಹ ಪತ್ತೆ
ಸುಬ್ರಹ್ಮಣ್ಯ: ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಎಂಬಲ್ಲಿ ಕಡವೆಯೊಂದರ ಮೃತ ದೇಹವೊಂದು ಗುರುವಾರ ಪತ್ತೆಯಾಗಿದೆ. ಇಲ್ಲಿಯ ಕೃಷಿಕ ಶಿವಾನಂದ ಎಂಬವರ ತೋಟದ ಪಕ್ಕ ದಿಣ್ಣೆಯಲ್ಲಿ ಈ ಮೃತ ದೇಹ ಕಂಡು ಬಂದಿದ್ದು, 3 ವರ್ಷ ಪ್ರಾಯದ್ದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಗುತ್ತಿಗಾರಿನ ಪಶು ವೈಧ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು. ಕಡವೆ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದೆ ಎಂದು ಸಹಾಯಕ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.