ಕರಪತ್ರ, ಪೋಸ್ಟ್ಕಾರ್ಡ್ ಚಳವಳಿ ಪ್ರಾರಂಭ
ಮಂಗಳೂರು: ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ಮಾರಕವಾಗಲಿರುವ ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡುವುದನ್ನು ವಿರೋಧಿಸಿ ಮಂಗಳೂರಿನ ಪರಿಸರ ಪ್ರೇಮಿಗಳು ಶನಿವಾರ ಕರಪತ್ರ ವಿತರಿಸಿ ಜನಜಾಗೃತಿ ಮತ್ತು ಪೋಸ್ಟ್ಕಾರ್ಡ್ ಅಭಿಯಾನ ಪ್ರಾರಂಭಿಸಿದ್ದಾರೆ.
ಕದ್ರಿ ಪಾರ್ಕ್ ಬಳಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದ ಅಂಗವಾಗಿ ಜಿಲ್ಲೆಯ ಕರಾವಳಿ ತೀರದುದ್ದಕ್ಕೂ ಬೀಚ್ಗಳಲ್ಲಿ ಕರಪತ್ರ ಹಂಚಿ ಅಂಚೆಕಾರ್ಡ್ ಮೂಲಕ ಯೋಜನೆ ರದ್ದುಪಡಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಲಾಗುವುದು. ಶಾಲಾ ಕಾಲೇಜುಗಳಲ್ಲೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುಂದಿನ ಹಂತವಾಗಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ತಾಲೂಕುಗಳ ನದಿಹರಿವು ಪ್ರದೇಶಗಳಲ್ಲಿ ಸಂಘ ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಪ್ರಸ್ತುತ 10 ಸಾವಿರ ಕರಪತ್ರ ಮತ್ತು 5 ಸಾವಿರ ಕಾರ್ಡ್ ಮುದ್ರಿಸಲಾಗಿದ್ದು, ಅಭಿಯಾನವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ವನ್ಯ ಚಾರಣ ಬಳಗದ ದಿನೇಶ್ ಹೊಳ್ಳ ಹೇಳಿದರು.
ತುಳುನಾಡಿನಲ್ಲಿ ಆಷಾಢ ಮಾಸದಲ್ಲಿ ಸಂಕಷ್ಟ ಹೋಗಲಾಡಿಸುವ ಆಟಿ ಕಳಂಜ ಮೂಲಕ ಕರಪತ್ರ ಮತ್ತು ಪೋಸ್ಟ್ಕಾರ್ಡ್ ಚಳವಳಿ ನಡೆಸಲಾಯಿತು. ಎಲ್ಲ ಅನಿಷ್ಟಗಳನ್ನು ಆಟಿಕಳಂಜ ದೂರ ಮಾಡುತ್ತಾನೆ ಎಂಬುದು ತುಳುನಾಡಿನ ನಂಬಿಕೆ. ಹಾಗಾಗಿ ಆಟಿಕಳಂಜನನ್ನು ಚಳವಳಿಯ ಮುಂಚೂಣಿಯಲ್ಲಿ ತರಲಾಯಿತು.
ಜಿಲ್ಲೆಗೆ ಶಾಶ್ವತ ಬರಗಾಲ?: ಎತ್ತಿನಹೊಳೆ ಯೋಜನೆ ಕಾರ್ಯಗತವಾದರೆ ದ.ಕ. ಜಿಲ್ಲೆಗೆ ನೀರಿಲ್ಲದೆ ಶಾಶ್ವತ ಬರಗಾಲ ಒದಗಬಹುದು. ನೇತ್ರಾವತಿ ನದಿಯ ಉಪನದಿಗಳು ಹರಿಯುವಲ್ಲಿ ಅಣೆಕಟ್ಟೆ ನಿರ್ಮಿಸಿ ಕೊವೆ ಹಾಗೂ ಕಾಲುವೆಗಳ ಮೂಲಕ ನದಿ ತಿರುಗಿಸಿದಾಗ ಅಪಾರ ಪ್ರಮಾಣದ ಶೋಲಾ ಅರಣ್ಯ ನಾಶವಾಗಲಿದೆ. ಮಳೆಯನ್ನು ಹೀರಿಕೊಳ್ಳುವ ಹುಲ್ಲುಗಾವಲುಗಳು ನಿರ್ನಾಮವಾಗಲಿದೆ. ವನ್ಯಜೀವಿಗಳು ನೆಲೆ ಕಳೆದುಕೊಳ್ಳಲಿವೆ. ಕಾಮಗಾರಿ ವೇಳೆ ಬೆಟ್ಟವನ್ನು ಕೊರೆದು ಅಪಾರ ಪ್ರಮಾಣದ ಕಲ್ಲು, ಮಣ್ಣು ರಾಶಿ ಹಾಕುವಾಗ ನದಿಯ ಚಿಕ್ಕ ಝರಿ, ತೊರೆಗಳು ಮುಚ್ಚಿಹೋಗಿ ನೈಸರ್ಗಿಕ ಅಸಮತೋಲನ ಉಂಟಾಗಬಹುದು. ಘಟ್ಟದ ಪ್ರಾಕೃತಿಕ ಸಂಪತ್ತು ನಾಶವಾದರೆ ಅತ್ತ ಬಯಲು ಸೀಮೆಗೆ, ಇತ್ತ ಕರಾವಳಿ ಜಿಲ್ಲೆಗೆ ನೀರಿಲ್ಲದಂತಾಗಿ ನೇತ್ರಾವತಿ ನದಿಯೇ ಬತ್ತಿ ಹೋಗಬಹುದು. ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕು ಎಂದು ಚಳವಳಿಗಾರರು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾಧವ ಉಳ್ಳಾಲ, ರೋಟರ್ಯಾಕ್ಟ್ ಕ್ಲಬ್ನ ಹರೀಶ್ ಆಚಾರ್ಯ, ಗಿರೀಶ್, ದಿನೇಶ್ ಕೊಡಿಯಾಲಬೈಲ್ ಮತ್ತಿತರರಿದ್ದರು.