ಖಾಸಗಿ ಬಸ್ ದರ ಶೇ.10ರಿಂದ 15ರಷ್ಟು ಏರಿಕೆ
ಮಂಗಳೂರು: ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣ ದರವನ್ನು ಶೇ.10ರಿಂದ 15ಕ್ಕೆ ಏರಿಸುವುದಾಗಿ ಘೋಷಿಸಿದ್ದಾರೆ. ಆ.20ರಿಂದ ಎಕ್ಸ್ಪ್ರೆಸ್, ಸರ್ವಿಸ್ ಬಸ್ ಪ್ರಯಾಣದರ ಏರಿಕೆ ಜಾರಿಗೆ ಬರಲಿದೆ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಬಸ್ಗಳ ಪ್ರಯಾಣ ದರ ಪರಿಷ್ಕರಣೆ ಮಾಡುವ ಅಧಿಕಾರ ಇಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಡೀಸೆಲ್ ದರ ಏರಿಕೆಯಿಂದ ಶೇ. 60ರಷ್ಟು ವೆಚ್ಚ ಇಂಧನಕ್ಕೆ ವ್ಯಯವಾಗುತ್ತಿದೆ. ಬಿಡಿಭಾಗಗಳ ದರವೂ ಸಿಕ್ಕಾಪಟ್ಟೆ ಏರಿರುವುದರಿಂದ ಲಾಭಾಂಶ ಇಳಿಮುಖವಾಗಿ ದರ ಏರಿಕೆಗೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ನೋಟಿಫಿಕೇಶನ್ ಪ್ರಕಾರ ಶೇ. 25ರ ವರೆಗೆ ಏರಿಕೆ ಅವಕಾಶವಿದ್ದರೂ ಜನರಿಗೆ ಹೊರೆಯಾಗುವ ಹಿನ್ನೆಲೆಯಲ್ಲಿ ಶೇ. 10ರಿಂದ 15ರಷ್ಟು ಮಾತ್ರ ಏರಿಸುತ್ತಿದ್ದೇವೆ. ಮುಂದಿನ ಹಂತಗಳಲ್ಲಿ ಕ್ರಮೇಣ ಶೇ.25ರಷ್ಟು ಏರಿಕೆ ಮಾಡಲಾಗುವುದು ಎಂದರು.
ಟಿಕೆಟ್ ಕನಿಷ್ಠ ದರ ರು. 6ರಿಂದ 7ಕ್ಕೇರಿಸಲಾಗಿದೆ. ಮಂಗಳೂರು- ಉಡುಪಿ ಪ್ರಯಾಣದರ 50 ರಿಂದ 55ಕ್ಕೇರಿಸಲಾಗಿದೆ. ಉಡುಪಿ- ಕುಂದಾಪುರ ಪ್ರಯಾಣ ದರ 34 ರಿಂದ 38ಕ್ಕೇರಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಸದಾನಂದ ಛಾತ್ರ, ಇತರ ಪದಾಧಿಕಾರಿಗಳಾದ ಜಯರಾಮ ಶೇಖ, ಬಾಲಕೃಷ್ಣ ರೈ, ಸುರೇಶ್ ನಾಯಕ್ ಇದ್ದರು.
ಆರ್ಎಫ್ಐಡಿ ಕಾರ್ಡ್ ವ್ಯವಸ್ಥೆ
ನಿತ್ಯ ಪ್ರಯಾಣಿಕರಿಗೆ ಆರ್ಎಫ್ ಐಡಿ ಕಾರ್ಡ್ ನೀಡುವ ಅತ್ಯಾಧುನಿಕ ಸ್ವೈಪ್ ಕಾರ್ಡ್ ಟಿಕೆಟ್ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಡ್ನಲ್ಲಿ ಒಂದು ತಿಂಗಳು ಮುಂಚಿತವಾಗಿ ಟಿಕೆಟ್ ದರದ ಮೌಲ್ಯವನ್ನು ನೀಡಿದರೆ ಶೇ.35 ರಿಯಾಯಿತಿ ನೀಡಲಾಗುವುದು. ಕೆನರಾ ಕಂಬೈನ್ಡ್ ಟ್ರಾನ್ಸ್ಪೋರ್ಟ್ ಹೆಸರಲ್ಲಿ ಮಂಗಳೂರಿನಿಂದ ಕುಂದಾಪುರದವರೆಗೆ ತೆರಳುವ ಖಾಸಗಿ ಬಸ್ಸುಗಳ ಮಾಲಕರು ಒಕ್ಕೂಟ ರಚಿಸಿದ್ದು ಈ ಎಲ್ಲಾ ಬಸ್ಗಳಲ್ಲಿ ಸ್ವೈಪ್ ಕಾರ್ಡ್ ಬಳಸಬಹುದು ಎಂದು ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.