ನೇತ್ರಾವತಿ ತಿರುಗಿಸಿದರೆ ದಕ್ಷಿಣ ಭಾರತಕ್ಕೇ ನೀರಿಲ್ಲ
ಮಂಗಳೂರು: 'ಎತ್ತಿನಹೊಳೆ ಯೋಜನೆಯ ನೇತ್ರಾವತಿ ತಿರುವಿನಿಂದ ಭವಿಷ್ಯದಲ್ಲಿ ದಕ್ಷಿಣ ಭಾರತವೇ ನೀರಿನ ಕೊರತೆ ಅನುಭವಿಸಲಿದೆ' ಎಂದು ಸುರತ್ಕಲ್ ಎನ್ಐಟಿಕೆ ಜಲಸಂಪನ್ಮೂಲ ವಿಭಾಗದ ಉಪನ್ಯಾಸಕ ಡಾ. ಎಸ್.ಜಿ. ಮಯ್ಯ ಹೇಳಿದ್ದಾರೆ.
ಕೆನರಾ ಕೈಗಾರಿಕೆ ಮತ್ತು ವಾಣಿಜ್ಯ ಸಂಘ ವತಿಯಿಂದ ಶನಿವಾರ ಕೆಸಿಸಿಐ ಸಭಾಂಗಣದಲ್ಲಿ 'ನೇತ್ರಾವತಿ ತಿರುವು ಯೋಜನೆ' ಕುರಿತು ಅವರು ಉಪನ್ಯಾಸ ನೀಡಿದರು.
ಪಶ್ಚಿಮಘಟ್ಟದಿಂದ ಹರಿಯುತ್ತಿರುವ ನೇತ್ರಾವತಿ ನದಿಯ ತಿರುವಿನಿಂದ ನದಿಯ ಪ್ರಾಕೃತಿಕ ಹರಿವಿಗೆ ತಡೆಯೊಡ್ಡಿದಂತಾಗುತ್ತದೆ. ಅಂತರ್ಜಲ ಕುಸಿತದಿಂದ ಪಶ್ಚಿಮಘಟ್ಟದ ನದಿಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಎತ್ತಿನಹೊಳೆ ಯೋಜನೆ ಮೂಲಕ ಸಕಲೇಶಪುರದ ಬಸಿ ಕಾಲುವೆಗೆ ಉಪನದಿಗಳ ನೀರನ್ನು ಹರಿಸಲಾಗುತ್ತದೆ. ಇಲ್ಲಿಂದ ನೀರು ಪಂಪು ಮಾಡಿ ಕಾಲುವೆಗಳ ಮೂಲಕ 8 ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಭೂ ಸವಕಳಿ, ಅಂತರ್ಜಲ ಕುಸಿತ, ಮಳೆ ಕಡಿಮೆಯಾಗುತ್ತದೆ. ಇದರ ಪರಿಣಾಮವನ್ನು ದಕ್ಷಿಣ ಭಾರತವೇ ಅನುಭವಿಸಲಿದೆ ಎಂದರು.
ಈ ಯೋಜನೆ ಮೊದಲ ಹಂತವೇ ನೇತ್ರಾವತಿ ತಿರುವು ಎಂಬುದಾಗಿದ್ದು, ದ.ಕ. ಜಿಲ್ಲೆಯ ದಾರಿ ತಪ್ಪಿಸಲು ಎತ್ತಿನಹೊಳೆ ಯೋಜನೆ ಎಂದು ಹೇಳಲಾಗುತ್ತಿದೆ. ಮುಂಬೈ ಇಐ ಟೆಕ್ನಾಲಜಿ ಪ್ರೈವೇಟ್ ಸಂಸ್ಥೆ 2012ರ ಮೇ 19ರಂದು ಎತ್ತಿನಹೊಳೆ ಯೋಜನೆಯ ಬಗ್ಗೆ ಕರ್ನಾಟಕ ನೀರಾವರಿ ನಿಗಮಕ್ಕೆ ವರದಿ ನೀಡಿದೆ ಎಂದರು.
ಇದೀಗ 3ನೇ ಯೋಜನೆ ಇದಾಗಿದ್ದು, 24 ಟಿಎಂಸಿ ನೀರು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕುಡಿಯಲು ಪೂರೈಸಲು ಎಂದಿರುವ ವರದಿಯಲ್ಲಿ, ಪ್ರಸ್ತುತ ಹಾಸನ, ತುಮಕೂರು, ಬೆಂಗಳೂರು ಜಿಲ್ಲೆಗಳನ್ನು ಸೇರಿಸಲಾಗಿದೆ.
ಅಲ್ಲದೆ ಕುಡಿಯುವ ನೀರು ಯೋಜನೆ ಮುಖ್ಯ ಉದ್ದೇಶ ಎಂದು ಹೇಳುತ್ತಿರುವ ವರದಿಯಲ್ಲಿ ಜಲ ವಿದ್ಯುತ್, ಪ್ರವಾಹ ತಡೆಗಟ್ಟಲು, ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸೇರಿಸಲಾಗಿದೆ. ಕುಡಿಯುವ ನೀರಿಗೆ ಕೊನೆಯ ಪ್ರಾಶಸ್ತ್ಯ ನೀಡಲಾಗಿದೆ. ಹೊಳೆಯಿಂದ ನೀರೆತ್ತಲು 370 ಮೆಗಾವ್ಯಾಟ್ಸ್ ವಿದ್ಯುತ್ನ್ನು ಬಳಸಿ, 233 ಕಿ.ಮೀ. ಉದ್ದದ ಸಿಮೆಂಟ್ ಕಾಲುವೆ ಮೂಲಕ ಹರಿಸಲಾಗುತ್ತದೆ.
ಈಗಾಗಲೇ 180 ದಿನ ನೀರಿಗೆ ಬರ: ನೇತ್ರಾವತಿ ನದಿಯಲ್ಲಿ ಒಟ್ಟು 90.2 ಟಿಎಂಸಿ ನೀರಿನ ಸಂಗ್ರಹವಿದೆ. ಜೂನ್-ಸಪ್ಟೆಂಬರ್ವರೆಗೆ ನೇತ್ರಾವತಿ ನದಿಯಲ್ಲಿ ಶೇ. 87 ನೀರಿನ ಹರಿವಿರುತ್ತದೆ. ಅಕ್ಟೋಬರ್-ಡಿಸೆಂಬರ್ಗೆ ಇದರ ಮಟ್ಟ ಶೇ. 12 ಹಾಗೂ ಜನವರಿಯಿಂದ ಮೇ ತಿಂಗಳವರೆಗೆ ಶೇ. 1 ನೀರಿನ ಸಂಗ್ರಹವಿರುತ್ತದೆ. ಒಟ್ಟು 180 ದಿನ ದ.ಕ. ಜಿಲ್ಲೆಯ ಜನರು ಕುಡಿಯುವ ನೀರಿನ ಕೊರತೆ ಅನುಭವಿಸುತ್ತಾರೆ ಎಂದರು. ಡಾ. ಕಸ್ತೂರಿ ರಂಗನ್ ವರದಿ ಪ್ರಕಾರ ನದಿಯಲ್ಲಿ ಮಳೆಗಾಲ ನೀರು ಶೇ. 30 ಉಳಿತಾಯ ಮಾಡಬೇಕು ಎಂಬುದಾಗಿದೆ. ಆದರೆ ಎತ್ತಿನಹೊಳೆ ಯೋಜನೆಯಲ್ಲಿ ಸಂಪೂರ್ಣವಾಗಿ ನೇತ್ರಾವತಿ ನದಿಯನ್ನು ಬರಿದು ಮಾಡಲಾಗುತ್ತಿದೆ. ಯೋಜನೆಯ ವರದಿಯಲ್ಲಿ ಜಿಲ್ಲೆಗೆ ಬಾದಿಸಲಿರುವ ನೀರಿನ ಕೊರತೆ ಕುರಿತು ಸಂಶೋಧನೆ ನಡೆಸಬೇಕಾಗಿದೆ ಎಂದರು.