ಪರವಾನಗಿ ದುರ್ಬಳಕೆ ಮಾಡಿ ಮರಳು ಸಾಗಾಟ: ನಾಲ್ವರ ವಿರುದ್ಧ ದೂರು
ಉಪ್ಪಿನಂಗಡಿ: ಪರವಾನಗಿ ದುರ್ಬಳಕೆ ಮಾಡಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಹರೀಶ್ ಎಚ್.ಪಿ. ಕಾರ್ಯನಿಮಿತ್ತ ಸಕಲೇಶಪುರಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ರಾ.ಹೆ. 75ರ ಕೋಣಾಲು ಪರಿಸರದಲ್ಲಿ ಮರಳು ಸಾಗಾಟದ ಲಾರಿಯನ್ನು ತಪಾಸಣೆಗೆ ಒಳಪಡಿಸಿದರು. ಈ ವೇಳೆ ಪರವಾನಗಿಯ ದುರ್ಬಳಕೆ ನಡೆದಿರುವುದು ಖಚಿತವಾಯಿತು. ಈ ಬಗ್ಗೆ ನಾಗೇಶ್ ಕಾಂಚನ್, ನಾಗರಾಜು, ಅನ್ವರ್ ಮತ್ತು ಲಾರಿ ಚಾಲಕ ಮೈಸೂರಿನ ಮಹಾದೇವ್ ಎಂಬವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.