ಬಂಟ್ವಾಳದಲ್ಲಿ 'ನಮೋ ಬ್ರದರ್ಸ್' ಸಂಘಟನೆಗೆ ಚಾಲನೆ
ಬಂಟ್ವಾಳ: ಮಾಜಿ ಪ್ರಧಾನಿ ವಾಜಪೇಯಿ ಅವರಂಥ ದೇಶ ಕಂಡ ಒಬ್ಬ ಸಮರ್ಥ ನಾಯಕತ್ವದ ಕೊರಗನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಗಿಸುತ್ತಿದ್ದು, ಪ್ರಸಕ್ತ ದಿನಗಳಲ್ಲಿ ದೇಶದೆಲ್ಲೆಡೆ ಮೋದಿ ಪರ ಅಲೆ ಎದ್ದಿದೆ ಎಂದು ಬಿ.ಸಿ. ರೋಡ್‌ನ ನ್ಯಾಯವಾದಿ ಜಯರಾಮ್ ರೈ ಹೇಳಿದರು. ಬಂಟ್ವಾಳದ ಶ್ರೀ ಸೀತಾರಾಮ ದೇವಸ್ಥಾನ ವಠಾರದಲ್ಲಿ ಭಾನುವಾರ 'ನಮೋ ಬ್ರದರ್ಸ್' ಬಂಟ್ವಾಳ ಸಂಘಟನೆಗೆ ಅಧಿಕೃತವಾಗಿ ಚಾಲನೆ ನೀಡಿ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿ, ಮೋದಿ ಭವಿಷ್ಯದಲ್ಲಿ ಪ್ರಧಾನಿಯಾಗುವವರೆಗೂ ಸದಸ್ಯತ್ವ ಅಭಿಯಾನ ಮುಂದುವರಿಯಬೇಕು ಎಂದರು.
ಪಕ್ಷದಲ್ಲಿ ಕಾರ್ಯಕರ್ತರಿಗೆ ಯಾವುದೇ ಕೊರತೆ ಇಲ್ಲ. ಹಿರಿಯ ನಾಯಕರೆನಿಸಿಕೊಂಡವರು ಒಗ್ಗಟ್ಟನ್ನು ಪ್ರದರ್ಶಿಸಿ ಮೋದಿ ನಾಯಕತ್ವವನ್ನು ಬೆಂಬಲಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿ ಕಾಣುವಂತಾಗಬೇಕು ಎಂದರು.
ಇದೇ ವೇಳೆ ನಮೋ ಬ್ರದರ್ಸ್ ಸದಸ್ಯತ್ವ ರಶೀದಿಯನ್ನು ಸಾಂಕೇತಿಕವಾಗಿ ನಿವೃತ್ತ ಯೋಧ ರಾಜೇಶ್ ಭಂಡಾರಿಬೆಟ್ಟು ವಿತರಿಸಿದರು.