ಅಂತರ್ಜಾಲ ಉದ್ಯೋಗ: ಯುವಕಗೆ ವಂಚನೆ
ಮಂಗಳೂರು: ಆನ್ಲೈನ್ ಮುಖೇನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಯುವಕ ನಕಲಿ ಸಂಸ್ಥೆಯ ವಂಚನಾ ಜಾಲಕ್ಕೆ ಸಿಲುಕಿ ಸುಮಾರು ರು. 10 ಸಾವಿರ ಕಳಕೊಂಡ ಘಟನೆ ಸೋಮವಾರ ವರದಿಯಾಗಿದೆ. ನಿರುದ್ಯೋಗಿ ಯುವಕನೊಬ್ಬ ಕೆಲಸಕ್ಕಾಗಿ ತನ್ನೆಲ್ಲಾ ಮಾಹಿತಿಯನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದ.
ಆ.12ರಂದು ಲಾರ್ಸನ್ ಅಂಡ್ ಟರ್ಬೋ ಕಂಪನಿಯ ಲೆಟರ್ಹೆಡ್ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಧನರಾಜ್ ಮೆಹ್ತಾ ಎಂಬವರ ಸಹಿ ಇದ್ದ ಪತ್ರ ಇವರಿಗೆ ತಲಪಿತ್ತು. ಸೆ.2ಕ್ಕೆ ಮುಂಬೈನಲ್ಲಿ ಸಂದರ್ಶನವಿದ್ದು, ರು. 9,500 ಮೊತ್ತವನ್ನು ಆ.13ರ ಮೊದಲು ಬ್ಯಾಂಕ್ಗೆ ಪಾವತಿಸಬೇಕು.
ಬಳಿಕ ಕಂಪನಿ ವಿಮಾನ ಟಿಕೆಟ್ ಮತ್ತು ಕಾಲ್ ಲೆಟರ್ ಕಳುಹಿಸುತ್ತದೆ ಎಂದು ಸೂಚಿಸಲಾಗಿತ್ತು. ಇದನ್ನು ಸತ್ಯವೆಂದು ನಂಬಿದ ಯುವಕ, ಮಹೇಶ್ ಕುಮಾರ್ ಎಂಬ ಹೆಸರಲ್ಲಿದ್ದ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಹಣ ಜಮೆ ಮಾಡಿದ್ದ. ಈ ಬಗ್ಗೆ ಯುವಕನ ಹೆತ್ತವರಿಗೆ ಸಂಶಯ ಬಂದು ವಿಚಾರಣೆ ನಡೆಸಿದಾಗ ಅದು ನಕಲಿ ಸಂಸ್ಥೆ ಎಂಬುದು ಗೊತ್ತಾಯಿತು.