ಅಡಕೆ ಕೊಳೆರೋಗ: 27ರಂದು ಸಭೆ
ಸುಳ್ಯ: ಅಡಕೆ ಕೃಷಿಗೆ ವ್ಯಾಪಕ ಕೊಳೆರೋಗ ಬಾಧಿಸಿರುವ ಹಿನ್ನೆಲೆಯಲ್ಲಿ ಸಾಲಮನ್ನಾ ಮತ್ತು ಪರಿಹಾರಕ್ಕೆ ಒತ್ತಾಯಿಸಲು ಆ.27ರಂದು ಹಕ್ಕೊತ್ತಾಯ ಸಭೆ ನಡೆಸಲು ಸೋಮವಾರ ನಡೆದ ಅಡಕೆ ಬೆಳೆಗಾರರ ಸಭೆಯಲ್ಲಿ ನಿರ್ಧರಿಸಲಾಯಿತು.
ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಸುಳ್ಯ ಸಮಿತಿ ಆಶ್ರಯದಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಮಿತಿ ಪದಾಧಿಕಾರಿಗಳ ಹಾಗೂ ಹಿರಿಯ ಅಡಕೆ ಬೆಳೆಗಾರರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಎಪಿಎಂಸಿ ಅಧ್ಯಕ್ಷ ಜಯರಾಮ ಹಾಡಿಕಲ್ಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಾಯಕ ತೋಟಗಾರಿಕ ಅಧಿಕಾರಿ ಸುಹಾನ ಮಾತನಾಡಿ, ತಾಲೂಕಿನಲ್ಲಿ ಒಟ್ಟು 8400 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅದರಲ್ಲಿ 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗೆ ಕೊಳೆ ರೋಗ ಬಾಧಿಸಿದೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಆದರೆ ಕೊಳೆ ರೋಗಕ್ಕೆ ಪರಿಹಾರ ನೀಡುವ ಕುರಿತು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಇಲಾಖೆಗಳು ಸರ್ಕಾರಕ್ಕೆ ವರದಿ ಸಲ್ಲಿಸುವುದು, ಅವರಿಂದ ಸಕಾರಾತ್ಮಕ ಸ್ಪಂದನೆ ನಿರೀಕ್ಷಿಸುವುದು ಕೊಳೆ ರೋಗದಿಂದ ಕಂಗೆಟ್ಟ ರೈತರಿಗೆ ಪರಿಹಾರವಾಗಲಾರದು ಎಂದು ಸಭೆಯಲ್ಲಿ ಭಾಗವಹಸಿದ್ದ ಹೆಚ್ಚಿನ ಬೆಳೆಗಾರರರು ಅಭಿಪ್ರಾಯಪಟ್ಟರು.
ಆ.27ರಂದು ಜಿಲ್ಲಾ ಉಸ್ತುವಾರಿ ಸಚಿವರು ಸುಳ್ಯಕ್ಕೆ ಬರುತ್ತಿದ್ದು, ಆ ಸಂದರ್ಭ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಸ್ಥಳೀಯ ಶಾಸಕರನ್ನು ಸೇರಿಸಿ ಎಪಿಎಂಸಿ ಆವರಣದಲ್ಲಿ ಹಕ್ಕೊತ್ತಾಯ ಸಭೆ ನಡೆಸಿ ಸಚಿವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಘದ ಸಂಚಾಲಕ ಎಂ.ಡಿ. ವಿಜಯಕುಮಾರ್, ಎಂ.ಜಿ. ಸತ್ಯನಾರಾಯಣ, ಕೆ. ವಿಶ್ವನಾಥ ರಾವ್, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಎ.ವಿ. ತೀರ್ಥರಾಮ್, ಚಂದ್ರ ಕೋಲ್ಚಾರ್, ಡಾ.ಯು.ಪಿ. ಶಿವಾನಂದ, ಪಿ.ಸಿ. ಜಯರಾಮ, ಪಿ.ಎಸ್. ಗಂಗಾಧರ್ ಮತ್ತಿತರರು ಇದ್ದರು.