ಅನುದಾನ ಇಲ್ಲದೆ ಕಾರ್ಯಕ್ರಮಕ್ಕೆ ತೊಂದರೆ
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಅನುದಾನ ಕಳೆದ ಎರಡು ತಿಂಗಳಿಂದ ಹಂಚಿಕೆಯಾಗಿಲ್ಲ. ಇದರಿಂದ ಜಿಲ್ಲೆಗಳಲ್ಲಿರುವ ಇಲಾಖೆಯ ಉಪನಿರ್ದೇಶಕರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಇಲಾಖೆ ಅನುದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯೋತ್ಸವದಂಥ ಪ್ರಮುಖ ಕಾರ್ಯಕ್ರಮಕ್ಕೂ ಅನುದಾನದ ಬಿಸಿ ತಟ್ಟಿದೆ.
ಪ್ರತಿ ವರ್ಷ ಮಾರ್ಚ್ ಒಳಗೆ ಬಜೆಟ್ ಅನುಮೋದನೆಗೊಂಡು ಮೇನಲ್ಲಿ ಜಿಲ್ಲಾವಾರು ಮೊತ್ತ ಬಿಡುಗಡೆಯಾಗುತ್ತಿತ್ತು. ಬಜೆಟ್ನಲ್ಲಿ ಕಾದಿರಿಸಿದ ಮೊತ್ತ ಬಿಡುಗಡೆ ಹಂತದಲ್ಲಿ ಎರಡನೇ ಬಜೆಟ್ ಮಂಡನೆಯಾದ್ದರಿಂದ ಮತ್ತೆ ವಿಳಂಬವಾಯಿತು. ಇದೀಗ ಆಗಸ್ಟ್ ಮಧ್ಯಭಾಗ ಕಳೆದರೂ ಅನುದಾನ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಿಗೆ ತಲಪಿಲ್ಲ.
ಈ ಬಾರಿ 13 ಕೋಟಿ ಖೋತಾ: ಫೆಬ್ರವರಿಯಲ್ಲಿ ಜಗದೀಶ್ ಶೆಟ್ಟರ್ ಮಂಡಿಸಿದ ಬಜೆಟ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರು. 165 ಕೋಟಿ ಮೊತ್ತ ನಿಗದಿಪಡಿಸಿದ್ದರು. ಈ ಮೊತ್ತ ಇಲಾಖೆಗೆ ಬಿಡುಗಡೆ ಮೊದಲೇ ಚುನಾವಣೆ, ನೀತಿಸಂಹಿತೆ ಅಡ್ಡಿಬಂತು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ರು. 13 ಕೋಟಿಯಷ್ಟು ಕಡಿಮೆ ಮೊತ್ತ ಕಾದಿರಿಸಲಾಗಿದೆ. ಅಂದರೆ ಈ ಬಾರಿ ಇಲಾಖೆಗೆ ಸಿಗುವ ಮೊತ್ತ ರು. 142 ಕೋಟಿ. ನಿಗಮ, ಮಂಡಳಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಯಾಕೆ ಅನುದಾನ ನೀಡಿಕೆಯಲ್ಲಿ ವಿಳಂಬ ಎಂಬುದು ಯಕ್ಷಪ್ರಶ್ನೆ.
ಅರ್ಜಿ ಸ್ವೀಕರಿಸಲು 'ಸಕಾಲ' ಭೀತಿ: ಈಗ ಜಿಲ್ಲೆಗಳ ಉಪನಿರ್ದೇಶಕರ ಕಚೇರಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕೋರಿ ಅರ್ಜಿ ಸಲ್ಲಿಸಲು ಬಂದರೆ ಕಲಾವಿದರನ್ನು ಅಧಿಕಾರಿಗಳು ವಾಪಸ್ ಕಳುಹಿಸುತ್ತಾರೆ. ಇಲಾಖೆಗೆ ಇನ್ನೂ ಅನುದಾನ ಬಂದಿಲ್ಲ. ಹಾಗಾಗಿ ಯಾವ ಭರವಸೆಯಲ್ಲಿ ಅರ್ಜಿ ತೆಗೆದುಕೊಳ್ಳಬೇಕು ಎಂದು ಕಲಾವಿದರನ್ನೇ ಪ್ರಶ್ನಿಸುತ್ತಾರೆ. ಇದರಿಂದ ಬಂದದಾರಿಗೆ ಸುಂಕವಿಲ್ಲ ಎಂಬಂತೆ ಅರ್ಜಿದಾರರು ವಾಪಸಾಗುತ್ತಾರೆ.
ವರ್ಷಂಪ್ರತಿ ಕ್ರಿಯಾಯೋಜನೆ ಬಂದ ಬಳಿಕವೇ ಅರ್ಜಿಯನ್ನು ತೆಗೆದುಕೊಳ್ಳುವುದು ಕ್ರಮ. ಕ್ರಿಯಾ ಯೋಜನೆ ಮಂಜೂರಾಗಿ ತಲುಪಿಲ್ಲವಾದ್ದರಿಂದ ಅರ್ಜಿಯನ್ನೂ ತೆಗೆದುಕೊಳ್ಳುತ್ತಿಲ್ಲ ಎನ್ನುವ ಸಮಜಾಯಿಸಿ ನೀಡುತ್ತಾರೆ ಇಲಾಖೆ ಅಧಿಕಾರಿಗಳು. ವಾಸ್ತವದಲ್ಲಿ ಸಕಾಲ ಯೋಜನೆ ಜಾರಿಗೊಂಡಿರುವುದರಿಂದ ನಿಗದಿತ ಅವಧಿಯಲ್ಲಿ ಕಾರ್ಯಕ್ರಮ ನೀಡದಿದ್ದರೆ ಅಥವಾ ನೀಡಲು ಸಾಧ್ಯವಿಲ್ಲ ಎಂದು ಮಾಹಿತಿ ಕೊಡಬೇಕು. ಆದರೆ ಅನುದಾನ ಬಂದಿಲ್ಲ ಎಂದು ಪ್ರತಿ ಬಾರಿ ಸಕಾಲದಲ್ಲಿ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಇದು ಸರ್ಕಾರದ ವಿರುದ್ಧವೇ ಉತ್ತರ ನೀಡಿದಂತಾಗುತ್ತದೆ ಎನ್ನವುದು ಅಧಿಕಾರಿಗಳ ಅಭಿಪ್ರಾಯ.
ಜಿಲ್ಲೆಯಲ್ಲಿ ಅತ್ಯಧಿಕ ಕಲಾವಿದರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಹಂಚಿಕೆ ಮಾಡುವುದು ಬೆಂಗಳೂರಿನಲ್ಲಿ. ಮುಖ್ಯವಾಗಿ ದ.ಕ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಲಾವಿದರಿದ್ದಾರೆ.
ಸಂಗೀತ, ನೃತ್ಯ, ಜಾನಪದ ಸೇರಿದಂತೆ ಮಂಗಳೂರು ತಾಲೂಕಲ್ಲೇ ಇರುವವರ ಸಂಖ್ಯೆ ಜಾಸ್ತಿ. ಇನ್ನು ಉಳಿದ ತಾಲೂಕಿನ ಲೆಕ್ಕಾಚಾರ ಬೇರೆ. ಹಾಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೆ ಕಾರ್ಯಕ್ರಮಕ್ಕೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಜಿಲ್ಲೆಗೆ ನಿಗದಿಪಡಿಸುವ ಮೊತ್ತ ಹೆಚ್ಚಿಸುವಂತೆ ಮನವಿ ಸಲ್ಲಿಸಿದರೂ ಇಲಾಖೆಯ ಉನ್ನತಾಧಿಕಾರಿಗಳು ಗಮನಕೊಡುತ್ತಿಲ್ಲ.
ಆತ್ಮಭೂಷಣ್