ಸುದ್ದಿ ಸಂಕ್ಷೇಪ
ಇಂದಿನಿಂದ ರೈಲು ಸಂಚಾರ ವ್ಯತ್ಯಯ
ಮಂಗಳೂರು: ಕೇರಳದ ಪದನ್ನೂರು ಜಂಕ್ಷನ್ ನವೀಕರಣ ಹಿನ್ನಲೆಯಲ್ಲಿ ಆ.20ರಿಂದ 25ರ ವರೆಗೆ ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಕೊಯಂಬತ್ತೂರ್ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ಅವಧಿಯಲ್ಲಿ ಪ್ಯಾಸೆಂಜರ್ ವಿಶೇಷ ರೈಲು ಸಂಚಾರವನ್ನು ಮಂಗಳೂರು ಸೆಂಟ್ರಲ್ ಮತ್ತು ಕೋಯಿಕ್ಕೋಡ್ ಮಧ್ಯೆ ಏರ್ಪಡಿಸಲಾಗುವುದು ಎಂದು ರೇಲ್ವೆ ಫಾಲ್ಘಾಟ್ ವಿಭಾಗ ಪ್ರಕಟಣೆ ತಿಳಿಸಿದೆ.
ಈಜಿಪ್ಟ್ ಸರ್ಕಾರದಿಂದ ನರಹತ್ಯೆ: ಉಡುಪಿಯಲ್ಲಿ ಪ್ರತಿಭಟನೆ
ಉಡುಪಿ: ಈಜಿಪ್ಟ್ ಸರ್ಕಾರ ನಡೆಯುತ್ತಿರುವ ನರಹತ್ಯೆಗಳ ವಿರುದ್ಧ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ವತಿಯಿಂದ ಸೋಮವಾರ ನಗರದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಅನ್ವರ್ ಅಲಿ ಕಾಪು, ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಆಯ್ಕೆಯಾದ ಸರ್ಕಾರವನ್ನು ಷಡ್ಯಂತ್ರದ ಮೂಲಕ ಉರುಳಿಸಿದ ಅಮೆರಿಕ ಮತ್ತು ಇಸ್ರೇಲ್‌ನ ಕೃತ್ಯವು ಜಾಗತಿಕ ಪ್ರಜಾಪ್ರಭುತ್ವದ ಬೆಂಬಲಿಗ ಶಕ್ತಿಗಳಿಗೆ ಆದ ಹಿನ್ನಡೆಯಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಮಾತನಾಡದೇ ಇರುವುದು ಅಚ್ಚರಿಯಾಗಿದೆ ಎಂದರು. ಜಮಾತೆ ಇಸ್ಲಾಮೀ ಹಿಂದ್ ಮತ್ತು ಇತರ ಸಂಘಟನೆಗಳ ನಾಯಕರಾದ ಇದ್ರಿಸ್ ಹೂಡೆ, ಯಾಸೀನ್ ಕೋಡಿಬೆಂಗ್ರೆ, ಮುಹಮ್ಮದ್ ಮರಕಡ, ಎಸ್‌ಐಒ ಜಿಲ್ಲಾಧ್ಯಕ್ಷ ರಿಯಾನ್, ಮಲ್ಪೆ ಅಲ್ಪಸಂಖ್ಯಾತರ ವೇದಿಕೆಯ ಬೈಕಾಡಿ ಹುಸೈನ್ ಸಾಹೆಬ್, ಜಿಐಒನ ನವಿದ ಅಸಾದಿ, ಫರ್ಹತ್ ದಾವೂದ್ ಇದ್ದರು.