11 ದೇಶಗಳ ವೈದ್ಯರಿಂದ ಅಮ್ಚಿ ಪ್ರೋಗ್ರಾಮ್
ಮಣಿಪಾಲ: ಭಾರತವೂ ಸೇರಿದಂತೆ 11 ದೇಶಗಳ ದಂತ ವೈದ್ಯಕೀಯ ತಜ್ಞರು ಸುಮಾರು 12 ದಿನಗಳ ಕಾಲ ಉತ್ತರ ಭಾರತದ ಹಿಮಾಲಯದ ತಪ್ಪಲಲ್ಲಿರುವ ಲಡಾಕ್ ಜಿಲ್ಲೆಯಲ್ಲಿ ಅಮ್ಚಿ ಪ್ರೋಗ್ರಾಂ ಎಂಬ ದಂತ ಆರೋಗ್ಯ ಶಿಬಿರವನ್ನು ನಡೆಸಿತು. 2ನೇ ವರ್ಷ ನಡೆಯುತ್ತಿರುವ ಈ ಶಿಬಿರದಲ್ಲಿ ಭಾರತದ ಪರವಾಗಿ ಮಣಿಪಾಲ ವಿವಿಯ ದಂತ ವಿಜ್ಞಾನ ಕಾಲೇಜಿನ ತಜ್ಞ ದಂತ ವೈದ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆ. 2ರಿಂದ 12ರವರೆಗೆ ನಡೆದ ಈ ಶಿಬಿರದಲ್ಲಿ ಅಲ್ಲಿನ ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರ ದಂತ ಆರೋಗ್ಯ ರಕ್ಷಣೆಯ ಜತಗೆ ಅಲ್ಲಿನ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ದಂತ ಆರೋಗ್ಯ ಸೇವೆಯ ಬಗ್ಗೆ ತರಬೇತಿಯನ್ನೂ ನೀಡಲಾಯಿತು. ಇಡಿಎಸ್ಎ (ಯೂರೋಪಿಯನ್ ಡೆಂಟಲ್ ಸ್ಟೂಡೆಂಟ್ಸ್ ಅಸೋಸಿಯೇಶನ್) ಮತ್ತು ಅಮೆರಿಕದ ದಂತ ಸ್ವಯಂಸೇವಕಾ ಸಂಘ ವಿಸ್ಡಂಟೂತ್ ಈ ಶಿಬಿರವನ್ನು ಆಯೋಜಿಸಿದ್ದು, 2012ರಲ್ಲಿ ನಡೆಸಲಾಗಿತ್ತು. ಆ ಶಿಬಿರದಲ್ಲಿ ತರಬೇತುಗೊಂಡಿದ್ದ ಸ್ಥಳೀಯ ಆರೋಗ್ಯ ಕಾರ್ಯಕರ್ತರು ವರ್ಷಪೂರ್ತಿ ಸ್ಥಳೀಯರಿಗೆ ದಂತ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಆಧುನಿಕವಾಗಿ ಈ ಬಾರಿಯ ಶಿಬಿರವನ್ನು ನಡೆಸಲಾಯಿತು.
ಈ ಬಾರಿ ಒಟ್ಟು 39 ಮಂದಿ ತಜ್ಞ ದಂತ ವೈದ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಡಾಕ್ ಜಿಲ್ಲೆಯ ಭಾರತ ಪಾಕಿಸ್ತಾನ ಗಡಿಯಲ್ಲಿರುವ ಕಾರ್ಗಿಲ್, ಪದುಮ್ ಮತ್ತು ಜಿಲ್ಲಾ ಕೇಂದ್ರ ಲೇಹ್ನ ಸುಮಾರು 5 ಜೂನಿಯರ್ ಕಾಲೇಜು ಮತ್ತು ಪ್ರೌಢಶಾಲೆಗಳಲ್ಲಿ ಶಿಬಿರ ನಡೆಯಿತು. ಒಟ್ಟು 1500 ಮಂದಿಯ ದಂತ ತಪಾಸಣೆ ನಡೆಸಿ, 1000 ಮಂದಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು.
ಮುಣಿಪಾಲ ದಂತ ವಿಜ್ಞಾನ ಕಾಲೇಜಿನಿಂದ ಈ ಶಿಬಿರದ ಯೋಜನಾಧಿಕಾರಿಗಳಾಗಿ ಡಾ. ಕನಿಕ ಶೋಭ್ಲೋಕ್ ಮತ್ತು ಡಾ. ಮಹಿಪಾಲ್ ಸಿಂಗ್ ರಾಥೋಡ್, ಕಾಲೇಜಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ ಡಾ. ಶಶಿಧರ್ ಆಚಾರ್ಯ ಶಿಬಿರವನ್ನು ಸಂಯೋಜಿಸಿದ್ದರು. ವಿದೇಶಿ ತಂಡದಲ್ಲಿ ಇಂಗ್ಲೆಂಡಿನ ಡಾ. ಅಂಡ್ರೇವ್ ಬರ್ಟ್ರರ್, ಅಸೋಸಿಯೇಶನ್ ಆಫ್ ಮೆಡಿಕಲ್ ಡಾಕ್ಟರ್ಸ್ ಆಫ್ ಏಶಿಯಾದ ಪರವಾಗಿ ಜಪಾನಿನ ಡಾ. ಕೈಕೊ ಸಾಯ್ಟೊ ನೇತೃತ್ವ ವಹಿಸಿದ್ದರು. ಜತೆಗೆ ಐರ್ಲೆಂಡ್, ನಾರ್ವೆ, ಫಿನ್ಲ್ಯಾಂಡ್, ಸ್ಪೈನ್, ಕೆನಡಾ, ರೋಮಾನಿಯಾ, ಕೆನ್ಯಾ ದೇಶಗಳ ವೈದ್ಯರು- ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಢಾಕಿ ಭಾಷೆಯಲ್ಲಿ ಅಮ್ಚಿ ಎಂದರೆ ಸಮುದಾಯ ಆರೋಗ್ಯ ಸೇವಕರು ಎಂದರ್ಥ, ಆದ್ದರಿಂದ ಈ ಯೋಜನೆಗೆ ಅಮ್ಚಿ ಪ್ರೋಗ್ರಾಂ ಎಂದು ಹೆಸರಿಡಲಾಗಿದೆ.